BlogEconomyEntertainmentFashionGovernmentHighlightsHuman storiesLifestyleLocal newsOthersPoliticsProtestState newsTop StoriesTrendingWomen Care

ನಾಡಾ: 75 ಕುಟಂಬಗಳಿರುವ ಅತ್ತಿಕೋಣೆಗೆ ಕುಡಿಯುವ ನೀರು ಕೊಡಿ – ಗ್ರಾಮಸ್ಥರ ಆಗ್ರಹ

Aware others:

ಕುಡಿಯುವ ನೀರಿಗೆ ದೋಣಿಯ ಆಶ್ರಯ, ಕಂಡೂ ಕಾಣದಂತಿವೆ ಸ್ಥಳೀಯಾಡಳಿತ – ಚುನಾವಣಾ ಬಹಿಷ್ಕಾರದ ಎಚ್ಚರಿಕೆ

Oplus_131072

ಕುಂದಾಪುರ: ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಜಲಜೀವನ್ ಮಿಷನ್, ಅಮೃತಧಾರಾ.. ಹೀಗೇ ಸರ್ಕಾರದ ಹಲವು ಯೋಜನೆಗಳು ಅನುಷ್ಠಾನಗೊಂಡರೂ, ಬೈಂದೂರು ತಾಲೂಕಿನ, ಸೌಪರ್ಣಿಕಾ ನದಿ ತೀರದ ಹಡವು ಗ್ರಾಮದ ಅತ್ತಿಕೋಣೆಯಲ್ಲಿ, ಕುಡಿಯುವ ನೀರಿಗೆ ತತ್ವಾರ! ಪರಿಣಾಮ ಇಲ್ಲಿನ ಜನರು ಉಪ್ಪು ನೀರು ಕುಡಿದೇ ಬದುಕಬೇಕಾದ ಹೀನಾಯ ಸ್ಥಿತಿ ಬಂದೊದಗಿದೆ.

Oplus_131072

ಹೌದು, ಬರೋಬ್ಬರಿ 20 ವರ್ಷಗಳ ಹಿಂದೆ, ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ನಿರ್ಮಾಣಗೊಂಡಿದ್ದ, 50 ಸಾವಿರ ಲೀಟರ್ ಸಾಮರ್ಥ್ಯದ ಹಳೆಯ ನೀರಿನ ಟ್ಯಾಂಕ್ ಸಮೀಪವೇ 22 ಲಕ್ಷ ರೂ. ಖರ್ಚು ಮಾಡಿ, ಹೊಸ ಟ್ಯಾಂಕ್ ನಿರ್ಮಿಸಲಾಗಿದೆ. ಇದರಿಂದ ಗುತ್ತಿಗೆದಾರರ ಹೊಟ್ಟೆ ತುಂಬಿದೆಯೇ ಹೊರತು, ಅತ್ತಿಕೋಣೆ ಜನ ಮಾತ್ರ ಕುಡಿಯುವ ನೀರಿಗಾಗಿ, ಚಾತಕ ಪಕ್ಷಿಯಂತೆ ಕಾದೂ ಕಾದೂ ಸುಸ್ತಾಗಿದ್ದಾರೆ!. ಒಂದು ಹನಿ ನೀರಿಗೂ, ಸೌಪರ್ಣೀಕಾ ಹೊಳೆಯನ್ನು ದೋಣಿಯಲ್ಲಿ ದಾಟಿ, ನೀರು ತರಬೇಕಾದ‌ ದುರಂತ ಸ್ಥಿತಿ ಅತ್ತಿಕೋಣೆಯ ನಾಗರಿಕರದ್ದು.

Oplus_131072

ಮಳೆಗಾಲದಲ್ಲಿ ಸಾಮಾನ್ಯವಾಗಿ, ಸೌಪರ್ಣಿಕಾ ನದಿ, ಸಿಹಿನೀರಿನಿಂದ ಕೂಡಿರುತ್ತದೆ. ಆದರೆ ಬೇಸಿಗೆಯಲ್ಲಿ, ಉಪ್ಪು ನೀರು ಆವರಿಸಿಕೊಳ್ಳುವ ಪರಿಣಾಮ, ದೋಣಿ ಮೂಲಕ ಹೊಳೆ ದಾಟಿ, ತ್ರಾಸಿಯ ಪರಿಚಯಸ್ಥರ ಮನೆಗಳಿಂದ ನೀರು ತರಬೇಕು. ಇದರಿಂದಾಗಿ ವೃದ್ಧರೇ ಇರುವ ಕೆಲವು ಮನೆಗಳಿಗೆ, ನೀರು ಸಂಗ್ರಹ ಅಸಾಧ್ಯವಾಗುತ್ತಿದೆ. ದಿನಕ್ಕೆ ಒಂದು ಕೊಡಪಾನ ನೀರೂ ಕುಡಿಯೋದಕ್ಕೆ ಸಿಗುತ್ತಿಲ್ಲ.

Oplus_131072

ವರ್ಷಂಪ್ರತಿ ನೀರಿನ ಸಮಸ್ಯೆ ಕಾಡುತ್ತಿದ್ದರೂ ,ಸ್ಥಳೀಯಾಡಳಿತದ ಕಿಂಚಿತ್ ಸ್ಪಂದನೆಯಿಲ್ಲ. ಬಾವಿ ತೋಡಿದರೂ, ಕೊಳವೆ ಬಾವಿ ಕೊರೆಯಿಸಿದರೂ, ಬರೀ ಉಪ್ಪು ನೀರೇ.. ಇದರಿಂದಾಗಿ ಇಲ್ಲಿಯ ಜನ, ಜಾನುವಾರುಗಳಿಗೆ ಉಪ್ಪು ನೀರು ಕುಡಿಯೋದು ಅನಿವಾರ್ಯವಾಗಿಬಿಟ್ಟಿದೆ. ಅನಾರೋಗ್ಯ ಪೀಡಿತರ ಸಮಸ್ಯೆಯಂತೂ, ಹೇಳತೀರದಾಗಿದೆ. ಹಲವು ಕುಟುಂಬಗಳು ಈಗಾಗಲೇ ಈ ಊರನ್ನೇ ಬಿಟ್ಟುಹೋಗಿದ್ದಾರೆ. ಜನಪ್ರತಿನಿಧಿಗಳು ಇವರ ಕಷ್ಟ ಕೇಳಲ್ಲ. ಮನೆಗೆ ಅಳವಡಿಸಿದ ನಳ್ಳಿಯಲ್ಲಿ, ನೀರು ಬರಲ್ಲ. ನಿತ್ಯ ಬಳಕೆಗೆ, ಕುಡಿಯೋದಕ್ಕೆ ನೀರಿಲ್ಲ. ಬೇಸಿಗೆಯಲ್ಲಿ ಅಗತ್ಯವಾಗಿ ಟ್ಯಾಂಕರ್ ಮೂಲಕವಾದರೂ ನೀರು ಪೂರೈಸಬೇಕು ಎನ್ನುವುದು ಗ್ರಾಮಸ್ಥರ ಆಗ್ರಹ.

Oplus_131072

ಚುನಾವಣೆ ಸಂದರ್ಭ ಮತ ಕೇಳಲು ಬರುವ ರಾಜಕಾರಣಿಗಳು ಗೆದ್ದ ಬಳಿಕ ಕಣ್ಣೆತ್ತಿಯೂ ನೋಡೋದಿಲ್ಲ. ಬಹುಕಾಲದ ನಮ್ಮ ಕುಡಿಯುವ ನೀರಿನ ಸಮಸ್ಯೆ ಸಹಿತ, ಮೂಲ ಸೌಕರ್ಯಗಳನ್ನು ಪೂರೈಸದೇ ಇದ್ದಲ್ಲಿ, ಮುಂಬರುವ ಚುನಾವಣೆಗಳನ್ನು ಬಹಿಷ್ಕರಿಸುವುದಾಗಿ, ಸ್ಥಳೀಯ ನಿವಾಸಿಗಳು ಎಚ್ಚರಿಸಿದ್ದಾರೆ.


Aware others:

Leave a Reply

Your email address will not be published. Required fields are marked *

error: Content is protected !!