ಖ್ಯಾತ ಜನಪದ ಹಾಡುಗಾರ ಡಾ. ಗಣೇಶ್ ಗಂಗೊಳ್ಳಿ ಹೃದಯಾಘಾತದಿಂದ ನಿಧನ
ಕುಂದಾಪುರ: ದೇಶಭಕ್ತಿಗೀತೆ ಹಾಗೂ ಜನಪದ ಗೀತೆ, ಭಾವಗೀತೆಗಳ ಖ್ಯಾತ ಹಾಡುಗಾರ, ಉಡುಪಿ ಜಿಲ್ಲಾ ಜಾನಪದ ಪರಿಷತ್ತಿನ ಅಧ್ಯಕ್ಷ, ಆಕಾಶವಾಣಿ ಕಲಾವಿದ ಡಾ. ಗಣೇಶ್ ಗಂಗೊಳ್ಳಿ ಅವರು ಮಂಗಳವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು.

ಅನಾರೋಗ್ಯದ ಕಾರಣಕ್ಕೆ ಉಡುಪಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದ ಸಹೋದರ ಶ್ರೀಧರ್ ಅವರನ್ನು ಭೇಟಿ ಮಾಡಿ ಹಿಂತಿರುಗುತ್ತಿದ್ದ ವೇಳೆ ಸಾಸ್ತಾನ ಟೋಲ್ ಗೇಟ್ ಸಮೀಪದ ಹೃದಯಾಘಾತಕ್ಕೊಳಗಾದರು. ತಕ್ಷಣ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ಅದಾಗಲೇ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ.
ಜಾನಪದ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಯುವರತ್ನ ಪ್ರಶಸ್ತಿ, ವಿವೇಕಾನಂದ ಸದ್ಭಾವನಾ ಪ್ರಶಸ್ತಿ, ಬೇಂದ್ರೆ ನುಡಿಸಿರಿ ರಾಷ್ಟ್ರೀಯ ಪ್ರಶಸ್ತಿ ಸಹಿತ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದ ಡಾ. ಗಣೇಶ್ ಗಂಗೊಳ್ಳಿ ಅವರು, ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಸಹಿತ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಎಪ್ರಿಲ್ 8ರಂದು ಬೆಳಿಗ್ಗೆ ಗಣೇಶ್ ಗಂಗೊಳ್ಳಿಯವರ ತಾಯಿ ಮನೆಯಾದ ಗಂಗೊಳ್ಳುಯ ಬಾವಿಕಟ್ಟೆ ಎಂಬಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ತಿಳಿದು ಬಂದಿದೆ.
