ಸಾಲಿಗ್ರಾಮ: ಶ್ರೀಗುರುನರಸಿಂಹ ದೇವಳದ ಪಾರುಪತ್ಯ ಕೆ. ಅನಂತ ಪದ್ಮನಾಭ ಐತಾಳ್ ನೇತೃತ್ವ ತಂಡದ ತೆಕ್ಕೆಗೆ?!
ಉದ್ಯಮಿ ಪ್ರಕಾಶ್ ಮಯ್ಯ ಅಧ್ಯಕ್ಷರಾಗಿ ಆಯ್ಕೆ ಸಂಭವ

ಸಾಲಿಗ್ರಾಮ: ರಾಜ್ಯದ ಪ್ರಮುಖ ಬ್ರಾಹ್ಮಣ ಕೂಟ ಮಹಾ ಜಗತ್ತು ಅಡಿಯಲ್ಲಿ ಬರುವ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಳದ 2026-31ನೇ ಸಾಲಿನ ಚುನಾವಣೆಯಲ್ಲಿ ಮಾಜೀ ಅಧ್ಯಕ್ಷ ಕೆ. ಅನಂತ ಪದ್ಮನಾಭ ಐತಾಳ್ ನೇತೃತ್ವದ ತಂಡ ಅಧಿಕಾರ ಹಿಡಿಯುವುದು ಬಹುತೇಕ ಖಚಿತವಾಗಿದೆ.


ಒಟ್ಟು ಆರು ಕ್ಷೇತ್ರಗಳ ಪೈಕಿ ಕರ್ನಾಟಕೇತರ ಭಾರತದ ಇತರ ರಾಜ್ಯಗಳ ಕ್ಷೇತ್ರದಿಂದ ಎಂ ಲಕ್ಷ್ಮೀನಾರಾಯಣ ಹೊಳ್ಳ ಮೊದಲೇ ಅವಿರೋಧ ಆಯ್ಕೆಯಾಗಿದ್ದು ಉಳಿದ ಐದು ಕ್ಷೇತ್ರಗಳಿಗೆ ಇಂದು ಮಾರ್ಚ್ 15ರಂದು ಸಾಲಿಗ್ರಾಮದಲ್ಲಿ ನೂತನ ಆಡಳಿತ ಮಂಡಳಿಗೆ ದೇವಳದ ವಠಾರದಲ್ಲಿ ಬೆಳಗ್ಗೆ 8ರಿಂದ ಸಂಜೆ 4ರ ವರೆಗೆ ಮತದಾನ ನಡೆಯಿತು.

ಚುನಾವಣೆಯಲ್ಲಿ ಮಾಜೀ ಅಧ್ಯಕ್ಷ ಹಾಗೂ ಸದಸ್ಯ ಕೆ. ಅನಂತ ಪದ್ಮನಾಭ ಐತಾಳ್ ಅವರ ತಂಡದ ಸಾಲಿಗ್ರಾಮ ಕ್ಷೇತ್ರದಿಂದ ತಾರನಾಥ್ ಹೊಳ್ಳ ಮತ್ತು ಪ್ರಸನ್ನ ತುಂಗ ಆಯ್ಕೆಯಾದರೆ ರಾಜ್ಯದ ಇತರೆಡೆಗಳ ಕ್ಷೇತ್ರದಿಂದ ಬೆಂಗಳೂರಿನ ಉದ್ಯಮಿ, ಇಂದ್ರಪ್ರಸ್ಥ ಮಾಲಕ ಪ್ರಕಾಶ್ ಮಯ್ಯ ಹಾಗೂ ಬಿ.ಜಿ. ಕೃಷ್ಣಮೂರ್ತಿಯವರು ಬಹುಮತದಿಂದ ಆಯ್ಕೆಯಾಗಿದ್ದಾರೆ.

ಇನ್ನು ಮಾಜೀ ಅಧ್ಯಕ್ಷ ಜಗದೀಶ್ ಕಾರಂತ ನೇತೃತ್ವದ ತಂಡದಿಂದ ಸಾಲಿಗ್ರಾಮ ಕ್ಷೇತ್ರದಿಂದ ಚಂದ್ರಶೇಖರ ಉಪಾದ್ಯ ಹಾಗೂ ಪರಶುರಾಮ ಭಟ್ ಆಯ್ಕೆಯಾದರೆ ರಾಜ್ಯದ ಇತರೆಡೆಗಳಿಂದ ಅಂದರೆ ಉಡುಪಿ ಕ್ಷೇತ್ರದಿಂದ ಬಿ. ಚಂದ್ರಶೇಖರ ನಾವಡ ಬೈಂದೂರು ಆಯ್ಕೆಯಾಗಿದ್ದಾರೆ. ದಕ್ಷಿಣ ಕನ್ನಡದಿಂದ ಪ್ರಕಾಶ್ ಕಾರಂತ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ.

ಒಟ್ಟು ಐದು ಕ್ಷೇತ್ರಗಳಿಗೆ 8 ಜನ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಾಗಿದ್ದು ಒಟ್ಟು 2,829 ಮತ ಚಲಾವಣೆಯಾಗಿತ್ತು. ఒಟ್ಟು 9 ಸ್ಥಾನಗಳಲ್ಲಿ ಒಂದು ಸ್ಥಾನಕ್ಕೆ ಲಕ್ಷ್ಮೀನಾರಾಯಣ ರಾವ್ ವರ್ಕಾಡಿ ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದ 8 ಸ್ಥಾನಕ್ಕೆ 18 ಮಂದಿ ಸ್ಪರ್ಧಾ ಕಣದಲ್ಲಿದ್ದರು.

ಮತಕ್ಷೇತ್ರ 1ರ ಸಾಲಿಗ್ರಾಮದದಿಂದ 4 ಅಭ್ಯರ್ಥಿಗಳ ಆಯ್ಕೆಗೆ ಸಿ.ಗಣೇಶ್ ಮಧ್ಯಸ್ಥ ಚಂದ್ರಶೇಖರ ಉಪಾಧ್ಯ, ಕೆ.ತಾರಾನಾಥ ಹೊಳ್ಳ, ಪರಶುರಾಮ ಭಟ್ಟ, ಪ್ರಸನ್ನ ತುಂಗ, ಬಾಲಕೃಷ್ಣ ನಕ್ಷತ್ರಿ, ಮುರುಳೀಧರ ಹೆಬ್ಬಾರ್ ಎ.ಎಸ್., ರಾಜಶೇಖರ ಹೆಬ್ಬಾರ್, ರಾಜಾರಾಮ ಐತಾಳ್ ಕೆ., ಸಿ.ಸುರೇಶ್ ತುಂಗ ಸೇರಿದಂತೆ ಒಟ್ಟು 10 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು.

ಮತ ಕ್ಷೇತ್ರ 2ರಲ್ಲಿ ಉಡುಪಿ ಜಿಲ್ಲೆಯ ಉಳಿದ ಭಾಗಗಳಾದ ಉಡುಪಿ, ಕಮಲಶಿಲೆ, ಕಿರಿಮಂಜೇಶ್ವರ, ಕುಂದಾಪುರ ವ್ಯಾಪ್ತಿಯಿಂದ ಬಿ.ಚಂದ್ರಶೇಖರ ನಾವಡ, ವೈ. ಸದಾರಾಮ ಹೇರ್ಳೆ ಸ್ಪರ್ಧಿಸಿದ್ದರು. ಮತ ಕ್ಷೇತ್ರ 3ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಒಬ್ಬರ ಆಯ್ಕೆಗಾಗಿ ಪ್ರಕಾಶ್ ಕಾರಂತ, ಸದಾಶಿವ ಐತಾಳ್ ಪಿ. ಸ್ಪರ್ಧಿಸಿದರೆ, ಮತ ಕ್ಷೇತ್ರ 4ರಲ್ಲಿ ಬೆಂಗಳೂರು ಕಾರ್ಪೊರೇಶನ್‌ನಿಂದ ಒಬ್ಬರ ಆಯ್ಕೆಗಾಗಿ ಪ್ರಕಾಶ ಮಯ್ಯ ಜಿ., ಸುರೇಶ್ ಹಂದೆ ಪಿ. ಸ್ಪರ್ಧಿಸಿದ್ದರು. ಮತ ಕ್ಷೇತ್ರ 5ರ ಕರ್ನಾಟಕ ರಾಜ್ಯದ ಇತರ ಭಾಗದಿಂದ ಬಿ.ಜಿ.ಕೃಷ್ಣಮೂರ್ತಿ, ಕೆ.ಪಿ.ಶೃಂಗೇಶ್ವರ ಸ್ವಾಮಿ ಕಣದಲ್ಲಿದ್ದರು. ಇದೀಗ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ಎಂಟು ಸದಸ್ಯರ ಪೈಕಿ ಕೆ.ಅನಂತಪದ್ಮನಾಭ ಐತಾಳ್ ತಂಡದಿಂದ ನಾಲ್ಕು ಸದಸ್ಯರು ಹಾಗೂ ಜಗದೀಶ್ ಕಾರಂತ ತಂಡದಿಂದ ಮೂವರು ಸದಸ್ಯರು, ಒಬ್ಬ ಸ್ವಂತಂತ್ರ ಅಭ್ಯರ್ಥಿ ಮತ್ತು ಒಬ್ಬರು ಅವಿರೋಧ ಆಯ್ಕೆಯಾದಂತಾಗಿದೆ.

2017 -2021 ರಅವಧಿಯಲ್ಲಿ ಅಧ್ಯಕ್ಷಗಾದಿ ಹಿಡಿದಿದ್ದ ಕೆ. ಅನಂತಪದ್ಮನಾಭ ಐತಾಳ್ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದು ಗಮನಾರ್ಹವಾಗಿದೆ. ಇದರಿಂದಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಲಕ್ಷ್ಮೀನಾರಾಯಣ ರಾವ್ ವರ್ಕಾಡಿ ಅವರು ಮತ್ತು ಸ್ವತಂತ್ರ ಸದಸ್ಯ ಪ್ರಕಾಶ್ ಕಾರಂತ್ ಅವರು ಕೆ. ಅನಂತಪದ್ಮನಾಭ ಐತಾಳ್ ನೇತೃತ್ವದ ತಂಡಕ್ಕೆ ಬೆಂಬಲ ಸೂಚಿಸುವ ಸಂಭವವಿದ್ದು, ಬೆಂಗಳೂರಿನ ಉದ್ಯಮಿ, ದಾನಿ, ಇಂದ್ರಪ್ರಸ್ಥದ ಮ್ಹಾಲಕ ಪ್ರಕಾಶ್ ಮಯ್ಯ ಅಧ್ಯಕ್ಷರಾಗಿ ಅಧಿಕಾರದ ಚುಕ್ಕಾಣಿ ಹಿಡಿಯುವ ಸಾಧ್ಯತೆ ನಿಚ್ಚಳವಾಗಿದೆ. ಚುನಾವಣಾ ಅಧ್ಯಕ್ಷ ಗಾದಿಗೆ ಬಿರುಸಿನ ಕಾರ್ಯತಂತ್ರಗಳು ನಡೆಯುತ್ತಿವೆ. ಮುಖ್ಯ ಚುನಾವಣಾಕಾರಿಯಾಗಿ ಎ.ಅಮೃತ ಹೊಳ್ಳ ಸಹಾಯಕ ಚುನಾವಣಾಧಿಕಾರಿಯಾಗಿ ವಿಶ್ವನಾಥ ಹೊಳ್ಳ ಕರ್ತವ್ಯ ನಿರ್ವಹಿಸಿದರು.
