ಕುಂದಾಪುರ ಪೇ ಪಾರ್ಕಿಂಗ್ ಬಗ್ಗೆ ಮಾಜೀ ಅಧ್ಯಕ್ಷರ ಹೇಳಿಕೆ ಬಾಲಿಶ – ಕೇಶವ ಭಟ್ ಆಕ್ರೋಶ
ಕುಂದಾಪುರ: ಕುಂದಾಪುರ ಪುರಸಭೆ ವ್ಯಾಪ್ತಿಯ ಮುಖ್ಯ ರಸ್ತೆಗಳ ಇಕ್ಕೆಲಗಳಲ್ಲಿ ಪೇ ಪಾರ್ಕಿಂಗ್ ವ್ಯವಸ್ಥೆ ಜಾರಿಗೊಳಿಸಲು ಟೆಂಡರ್ ಕರೆದಿರುವ ವಿಚಾರಕ್ಕೆ ಸಂಬಂಧಿಸಿ ಪುರಸಭೆಯ ನಿರ್ಗಮಿತ ಅಧ್ಯಕ್ಷರಾದ ಮೋಹನ್ ದಾಸ್ ಶೆಣೈ ಹೇಳಿಕೆ ಬಾಲಿಶ ಹಾಗೂ ಮೂರ್ಖತನದಿಂದ ಕೂಡಿದೆ ಎಂದು ಪುರಸಭೆ ಮಾಜೀ ಸದಸ್ಯ ಕೇಶವ ಭಟ್ ಹೇಳಿದ್ದಾರೆ.

ಪತ್ರಿಕಾ ಪ್ರಕಟಣೆಯ ಮೂಲಕ ಹೇಳಿಕೆ ನೀಡಿರುವ ಅವರು, ಕುಂದಾಪುರದ ರಾಷ್ಟ್ರೀಯ ಹೆದ್ದಾರಿ ಪ್ರೈಓವರ್ ಕೆಳಗಿನ ಜಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲು ಪುರಸಭೆಗೆ ಟೆಂಡರ್ ಕರೆಯಲು ಅವಕಾಶ ಇಲ್ಲದಿರುವುದರಿಂದ ಕೆಲವು ಸರಕಾರಿ ಜಾಗಗಳನ್ನು ಗುರುತಿಸಿ ಟೆಂಡರ್ ಕರೆಯುವ ಬಗ್ಗೆ ಯೋಚಿಸಲಾಗಿತ್ತು ಮತ್ತು “ಆ ನಂತರ ಮುಂದಿನ ಹೆಜ್ಜೆ ಇಡಲು ನಿರ್ಧರಿಸಲಾಗಿತ್ತು” ಎಂದು ಮಾಜೀ ಅಧ್ಯಕ್ಷರು ಹೇಲಿಕೆ ನೀಡಿದ್ದಾರೆ ಎಂದ ಕೇಶವ ಭಟ್,ಜೊತೆಗೆ ಲಯನ್ಸ್ ಕ್ಲಬ್ ಪ್ರೈಓವರ್ ಕೆಳಗೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಪಾರ್ಕಿಂಗ್ ವ್ಯವಸ್ಥೆ ಅಭಿವೃದ್ಧಿಪಡಿಸಲು ಆಸಕ್ತಿ ತೋರಿದ್ದರೆಂದು ಕೂಡ ಉಲ್ಲೇಖಿಸಿರುವ ಕುರಿತು ಪ್ರತಿಕ್ರಿಯಿಸಿರುವ ಕೇಶವ ಭಟ್, ಕುಂದಾಪುರ ಪುರಸಭೆಗೆ ರಾಷ್ಟ್ರೀಯ ಹೆದ್ದಾರಿ ಪ್ರೈಓವರ್ ಕೆಳಗಿನ ಜಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಆಸಕ್ತಿ ಇದ್ದರೆ ಅದು ಸ್ವಾಗತಾರ್ಹ. ಆದರೆ ಆ ಜಾಗ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಸೇರಿದ್ದಾಗಿರುವುದರಿಂದ ಪುರಸಭೆಗೆ ಈ ಬಗ್ಗೆ ಯಾವುದೇ ಅಧಿಕಾರವಿಲ್ಲ. ಒಂದೊಮ್ಮೆ ಈ ಬಗ್ಗೆ ಪ್ರತಿಕ್ರಿಯಿಸುವುದಿದ್ದರೆ ಸಂಬಂಧಿತ ಇಲಾಖೆಗಳ ನಡುವೆ ಚರ್ಚಿಸಿರುವ ಕುರಿತು ಮಾಹಿತಿ ನೀಡಬೇಕು ಅಂದು ಆಗ್ರಹಿಸಿದ್ದಾರೆ.

ಆದರೆ ಅಲ್ಲಿ ಟೆಂಡರ್ ಕರೆಯಲು ಸಾಧ್ಯವಿಲ್ಲ ಎಂಬ ಕಾರಣವನ್ನು ಮುಂದಿಟ್ಟುಕೊಂಡು ನಗರದ ಮುಖ್ಯ ರಸ್ತೆಗಳ ಇಕ್ಕೆಲಗಳಲ್ಲಿ ಪೇ ಪಾರ್ಕಿಂಗ್ ಟೆಂಡರ್ ಕರೆಯುವುದು ಎಷ್ಟು ಸರಿ? ಎಂದು ಪ್ರಶ್ನಿಸಿರುವ ಕೇಶವ ಭಟ್, ಆ ನಂತರ ಮುಂದಿನ ಹೆಜ್ಜೆ ಇಡಲು ನಿರ್ಧರಿಸಲಾಗಿತ್ತು ಎಂಬ ರೀತಿಯ ಹೇಳಿಕೆ ನೀಡುವುದು ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನ ಎಂದು ಆರೋಪಿಸಿದ್ದಾರೆ.
ಮುಖ್ಯ ರಸ್ತೆಗಳ ಇಕ್ಕೆಲಗಳಲ್ಲಿ ಪಾರ್ಕಿಂಗ್ ಟೆಂಡರ್ ಕರೆಯುವುದು ತಾತ್ಕಾಲಿಕ ಕ್ರಮ ಮಾತ್ರ; ನಂತರ ಪ್ಲೈಓವರ್ ಕೆಳಗಿನ ಜಾಗದಲ್ಲಿ ಮಾತ್ರ ಶುಲ್ಕ ಸಂಗ್ರಹ ಮಾಡುವ ಯೋಜನೆ ಇದೆ ಎನ್ನುವುದು ಜನರನ್ನು ವಂಚಿಸುವ ತಂತ್ರವಾಗಿದೆ. ಯಾವುದೇ ಗುತ್ತಿಗೆದಾರನು ಟೆಂಡರ್ ಮೂಲಕ ಒಪ್ಪಂದ ಮಾಡಿಕೊಂಡಿರುವ ಸ್ಥಳಗಳಲ್ಲಿ ವರ್ಷಕ್ಕೆ ಸಂಗ್ರಹವಾಗುವ ಲಕ್ಷಾಂತರ ಅಥವಾ ಕೋಟ್ಯಂತರ ರೂಪಾಯಿ ಆದಾಯವನ್ನು ಬಿಟ್ಟು, ಟೆಂಡರ್ ವ್ಯಾಪ್ತಿಗೆ ಬಾರದ, ಪುರಸಭಾ ಅಧಿಕಾರ ವ್ಯಾಪ್ತಿಗೊಳಪಡದ ಪ್ಲೈಓವರ್ ಕೆಳಗಿನ ಜಾಗದಲ್ಲಿ ಮಾತ್ರ ಹೇಗೆ ಶುಲ್ಕ ವಸೂಲಿ ಮಾಡುತ್ತಾರೆ? ಒಂದು ವೇಳೆ ಟೆಂಡರ್ ಗುತ್ತಿಗೆದಾರ ಪ್ಲೈಓವರ್ ಅಡಿಯಲ್ಲಿ ಶುಲ್ಕ ವಸೂಲಿ ಮಾಡದೆ, ಟೆಂಡರ್‌ನಲ್ಲಿ ನಮೂದಿಸಲಾದ ಮುಖ್ಯ ರಸ್ತೆಗಳ ಇಕ್ಕೆಲಗಳಲ್ಲಿ ನಿಲ್ಲಿಸಲಾದ ವಾಹನಗಳಿಂದ ಶುಲ್ಕ ವಸೂಲಿಗೆ ಬಲವಂತವಾಗಿ ಮುಂದಾದರೆ ಅಧಿಕಾರಿಗಳು ಹೇಗೆ ಅದನ್ನು ತಡೆಯುತ್ತಾರೆ ಎನ್ನುವುದನ್ನು ಸಂಬಂಧಪಟ್ಟವರು ವಿವರಿಸಬೇಕು ಎಂದು ಆಗ್ರಹಿಸಿದ್ದಾರೆ.

ಆದುದರಿಂದ ಇಂತಹಾ ಬಾಲಿಶ ಹೇಳಿಕೆಗಳನ್ನು ಜವಾಬ್ಧಾರಿಯುತ ಸ್ಥಾನದಲ್ಲಿರುವವರು ಸಾರ್ವಜನಿಕವಾಗಿ ಪ್ರಕಟಸಿದರೆ ಅದನ್ನು ನಂಬಲು ಜನ ಮೂರ್ಖರಲ್ಲ ಎನ್ನುವುದನ್ನು ಮೋಹನದಾಸ ಶೆಣೈ ಅರಿತುಕೊಳ್ಳಬೇಕು ಎಂದು ಎಚ್ಚರಿಸಿದ್ದಾರೆ.
ಕುಂದಾಪುರದಂತಹ ಪಟ್ಟಣದಲ್ಲಿ ಸಾರ್ವಜನಿಕರು, ಸಣ್ಣ ವ್ಯಾಪಾರಿಗಳು ಮತ್ತು ಗ್ರಾಹಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಪಾರ್ಕಿಂಗ್ ವ್ಯವಸ್ಥೆ ಕುರಿತು ಪಾರದರ್ಶಕ ಹಾಗೂ ಸಮಗ್ರ ನಿರ್ಧಾರ ಕೈಗೊಳ್ಳಬೇಕು. ಪುರಸಭೆ ಆಡಳಿತವು ಸಾರ್ವಜನಿಕರ ಮೇಲೆ ಹೇರುತ್ತಿರುವ ಇಂತಹಾ ಕಾನೂನು ಬಾಹಿರ ಕ್ರಮಗಳನ್ನು ಮರುಪರಿಶೀಲಿಸಬೇಕು ಎಂದು ಒತ್ತಾಯಿಸಿದ್ದಾರೆ.
