ಕೊರಗ ಸಮುದಾಯಕ್ಕೆ ಮೀಸಲಿಟ್ಟ ಭೂ ಮಂಜೂರಾತಿ, ಹಕ್ಕುಪತ್ರ ಆಗ್ರಹಿಸಿ ಧರಣಿಗೆ ಆರಂಭಿಕ ಜಯ

ಕುಂದಾಪುರ: ಆಲೂರು, ಹರ್ಕೂರು ಹಾಗೂ ಸ್ಥಳೀಯ 13 ಕೊರಗ ಸಮುದಾಯದ ಕುಟುಂಬಗಳಿಗೆ ಕಾದಿರಿಸಲಾದ ಭೂಮಿಗೆ ಮಂಜೂರಾತಿ ನೀಡಿ ಹಕ್ಕುಪತ್ರ ಒದಗಿಸುವಂತೆ ಆಗ್ರಹಿಸಿ ಕುಂದಾಪುರ ತಹಶೀಲ್ದಾರ್ ಕಛೇರಿ ಎದುರು ಹಮ್ಮಿಕೊಳ್ಳಲಾದ ಅಹೋರಾತ್ರಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ತಹಶೀಲ್ದಾರ್ ಅವರು ಲಿಖಿತ ಭರವಸೆ ನೀಡಿದ್ದು, ಆರಂಭಿಕ ಜಯವಾಗಿದೆ. ಈ ಹಿನ್ನೆಲೆಯಲ್ಲಿ ಧರಣಿ ಅಂತ್ಯಗೊಂಡಿದೆ.

ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಕಳೆದ 2016 ರಿಂದ ನಿರಂತರವಾಗಿ 10 ವರ್ಷಗಳ ಕಾಲ ಆಲೂರು-ಹರ್ಕೂರು ಗ್ರಾಮದಲ್ಲಿ ಲಭ್ಯವಿರುವ ಡಿಸಿ ಮನ್ನಾ ಭೂಮಿ ಹಾಗೂ ಸರಕಾರಿ ಭೂಮಿಯಲ್ಲಿ ಡಾ. ಮಹಮ್ಮದ್ ಫೀರ್ ವರದಿ ಅನ್ವಯ ಕನಿಷ್ಟ ತಲಾ ಒಂದು ಎಕರೆಯಂತೆ 13 ಕೊರಗ ಕುಟುಂಬಗಳಿಗೆ ಭೂಮಿ ನೀಡಲು ಸಾಕಷ್ಟು ಬಾರಿ ಧರಣಿ, ಮನವಿ ನೀಡುತ್ತಾ ಬಂದಿದ್ದೆ. ಆಲೂರು ಹರ್ಕೂರು ಗ್ರಾಮದಲ್ಲಿ ಭೂಮಿ ಲಭ್ಯವಿಲ್ಲ ಎಂದು ಕಂದಾಯ ಇಲಾಖೆ ಕೈಚೆಲ್ಲಿ ಕುಳಿತಾಗ ಆದಿವಾಸಿ ಸಂಘಟನೆಯು ಕೊರಗ ಸಮುದಾಯದ ಮುತುವರ್ಜಿಯಿಂದ ಸ್ವತಹ ಭೂಮಿ ಗುರುತಿಸಿ ತಾಲೂಕು ಆಡಳಿತಕ್ಕೆ ದಾಖಲೆಗಳು ಸಲ್ಲಿಸಿದಾಗ ಜಂಟಿ ಸರ್ವೆ ನಡೆಸಲಾಗಿತ್ತು. ಪ್ರಸ್ತುತವಾಗಿ ಸರ್ವೆನಕ್ಷೆ, ಮಹಜರು, ಹೇಳಿಕೆ, ಗ್ರಾಮ ಆಡಳಿತ ಅಧಿಕಾರಿಯವರು ಮತ್ತು ವಂಡ್ಸೆ ಕಂದಾಯ ನೀರಿಕ್ಷಕರ ವರದಿ ಸಹ ತಾಲೂಕು ಆಡಳಿತದ ಕೈ ಸೇರಿತ್ತು. ಆದರೆ ಭೂಮಿಗೆ ಹಕ್ಕು ಪತ್ರ ನೀಡಲು ಬೇಕಾದ ಪ್ರಕ್ರಿಯೇ ನಡೆದಿರಲಿಲ್ಲ. ಪೆಬ್ರುವರಿ ಮೊದಲ ವಾರದಲ್ಲಿ ಮತ್ತೊಂದು ಮನವಿ ನೀಡಿದ್ದು, 10 ದಿನದಲ್ಲಿ ಮಂಜೂರಾತಿ ಪ್ರಕ್ರೀಯೆಗೆ ಬೇಕಾದ ಅಗತ್ಯ ಕ್ರಮವಹಿಸುವುದಾಗಿ ಭರವಸೆ ನೀಡಿದ್ದರು. ಆದರೂ ಯಾವುದೇ ಬೆಳವಣಿಗೆಯಾಗಿರಲಿಲ್ಲ.

ಈ ಹಿನ್ನೆಲೆಯಲ್ಲಿ ಫೆಬ್ರುವರಿ 23ರಿಂದ ನ್ಯಾಯಯುತ ಬೇಡಿಕೆ ಈಡೇರುವವರೆಗೆ ತಹಶೀಲ್ದಾರ್ ಕಛೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು. ಕೊರಗ ಸಮುದಾಯದ ಭೂಮಿಯ ಹಕ್ಕಿನ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸರ್ವೇ ನಕ್ಷೆಯಲ್ಲಿ ಇರುವಂತೆ ಆಲೂರು ಹರ್ಕೂರು ಮತ್ತು ಸ್ಥಳೀಯ 13 ಕೊರಗ ಸಮುದಾಯದ ಕುಟುಂಬಗಳಿಗೆ ಭೂಮಿ ಮಂಜೂರುಗೊಳಿಸಲು ಅಗತ್ಯ ಕ್ರಮವಹಿಸಬೇಕು ಎಂದು ಒತ್ತಾಯಿಸಲಾಗಿತ್ತು.

ಧರಣಿ ಸ್ಥಳಕ್ಕೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಆಗಮಿಸಿ ಮನವಿ ಸ್ವೀಕರಿಸಿ ಕಂದಾಯ ಇಲಾಖೆ ಸಮನ್ವಯತೆಯಲ್ಲಿ ಅಗತ್ಯ ಕ್ರಮ ವಹಿಸುವುದಾಗಿ ತಿಳಿಸಿದ್ದಾರೆ. ಬಳಿಕ ಸಂಜೆ ತಹಶೀಲ್ದಾರ್ ಅಹವಾಲು ಸ್ವೀಕರಿಸಿ, ಆಲೂರು ಗ್ರಾಮದಲ್ಲಿ ಕಾದಿರಿಸಿರುವ ಭೂಮಿಯಲ್ಲಿ ಗೇರು ನಿಗಮದ ನೆಡುತೋಪು ಇರುವುದರಿಂದ ಅಭಿಪ್ರಾಯ ಕೇಳಲಾಗಿದೆ. ಮಾರ್ಚ್ 5 ರೊಳಗೆ ಉತ್ತರ ನೀಡದಿದ್ದಲ್ಲಿ ಮಂಜೂರಾತಿ ನೀಡಲಾಗುತ್ತದೆ ಎಂದು ಲಿಖಿತ ಭರವಸೆ ನೀಡಿದರು.

ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಜಿಲ್ಲಾ ಸಂಚಾಲಕ ಶ್ರೀಧರ ನಾಡ, ರಾಜ್ಯ ಸಮಿತಿ ಸದಸ್ಯ ಗಣೇಶ ಆಲೂರು, ಕೊರಗ ನಾರ್ಕಳಿ, ಚಂದ್ರಾವತಿ ಬ್ರಹ್ಮೇರಿ, ಸುರೇಶ ಆಲೂರು, ನಾಗರತ್ನ, ಜಯಲಕ್ಷ್ಮಿ, ಸಾಧು ನಾರ್ಕಳಿ, ರೇಷ್ಮಾ ನಾಡ, ಕಾರ್ಮಿಕ ಮುಖಂಡರಾದ ಸುರೇಶ್ ಕಲಾಗಾರ್, ಚಂದ್ರಶೇಖರ, ಮಹಾಬಲ ವಡೆರೋಬಳಿ, ಎಚ್ ನರಸಿಂಹ, ಜನವಾದಿ ಮಹಿಳಾ ಸಂಘಟನೆ ಮುಖಂಡರಾದ ಶೀಲಾವತಿ, ನಾಗರತ್ನ ನಾಡ ಉಪಸ್ಥಿತರಿದ್ದರು.
