ಅಕ್ರಮ ಅನ್ನಭಾಗ್ಯ ಅಕ್ಕಿ ಸಾಗಾಟ- ಚಾಲಕ ಸಹಿತ ಮೂರು ಕ್ವಿಂಟಾಲ್ ಅಕ್ಕಿ ವಶಕ್ಕೆ
ಕುಂದಾಪುರ: ರಾಜ್ಯ ಸರ್ಕಾರದ ಉಚಿತ ಅನ್ನಭಾಗ್ಯ ಯೋಜನೆ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಆಟೋ ಚಾಲಕ ಸಹಿತ ಮೂರು ಕ್ವಿಂಟಾಲ್ ಅಕ್ಕಿಯನ್ನು ಕುಂದಾಪುರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತನನ್ನು ಕೃಷ್ಣ ಖಾರ್ವಿ ಎಂದು ಗುರುತಿಸಲಾಗಿದೆ.

ಕುಂದಾಪುರ ಆಹಾರ ನಿರೀಕ್ಷಕ ಸುರೇಶ್ ಎಚ್.ಎಸ್ ಅವರಿಗೆ ದೊರಕಿದ ಖಚಿತ ಮಾಹಿತಿಯಂತೆ ಕುಂದಾಪುರ ತಾಲೂಕು ಕಸಬಾ ಗ್ರಾಮದ ರಿಂಗ್ ರಸ್ತೆ ಸಮೀಪ ಉಚಿತ ಅನ್ನಭಾಗ್ಯ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದೆ ಎಂಬುದಾಗಿ ಕುಂದಾಫುರ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಪೊಲೀಸರು ಶನಿವಾರ ಸಂಜೆ ಸುಮಾರು 6.40ರ ಸುಮಾರಿಗೆ ಸ್ಥಳಕ್ಕೆ ತೆರಳಿ ನಿಗಾ ವಹಿಸಿ ಖಾರ್ವಿಕೇರಿ ರಿಂಗ್ ರಸ್ತೆ ಕಡೆಯಿಂದ KA20AC2865 ನೋಂದಣಿ ಸಂಖ್ಯೆಯ ಬಜಾಜ್ ಮ್ಯಾಕ್ಸ್ ಕಂಪೆನಿಯ ಆಟೋ ರಿಕ್ಷಾ ಬರುತ್ತಿರುವುದನ್ನು ಗಮನಿಸಿ ವಾಹನವನ್ನು ತಡೆದು ಪರಿಶೀಲನೆ ನಡೆಸಿದ ಅಕ್ರಮ ಪ್ರಕಣ ಬೆಳಕಿಗೆ ಬಂದಿದೆ.
50 ಕೆ.ಜಿ ಯ 1 ಚೀಲ, 40 ಕೆ.ಜಿ ಯ 4 ಚೀಲಗಳು ಹಾಗೂ 30 ಕೆ.ಜಿ ಯ 3 ಚೀಲಗಳು ಸೇರಿದಂತೆ ಒಟ್ಟು ಅಂದಾಜು ಮೌಲ್ಯ ರೂ.7,200ಗಳ 300 ಕೆ.ಜಿ ತೂಕದ ಅಕ್ಕಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
