ಬಿಜೆಪಿ ಕಾರ್ಯಕರ್ತರ ತಂಟೆಗೆ ಬರಬೇಡಿ : ಶಾಸಕ ಗುರುರಾಜ್ ಗಂಟಿಹೊಳೆ ಎಚ್ಚರಿಕೆ
ಬೈಂದೂರು: ಬಿಜೆಪಿ ಕಾರ್ಯಕರ್ತರ ತಂಟೆಗೆ ಬಂದರೆ ನಾವು ಕಾಂಗ್ರೆಸ್ ಕಾರ್ಯಕರ್ತರ ತಂಟೆಗೆ ಬರುವುದಿಲ್ಲ. ನೇರವಾಗಿ ಕಾಂಗ್ರೆಸ್ ನಾಯಕರ ತಂಟೆಗೆ ಬರ್ತೇವೆ ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಎಚ್ಚರಿಸಿದ್ದಾರೆ. ಶನಿವಾರ ಬೆಳಿಗ್ಗೆ ಬೈಂದೂರಿನ ಖಾಸಗೀ ಹೋಟೆಲ್ ನಲ್ಲಿ ಕರೆದ ಸುದ್ಧಿಗೋಷ್ಟಿಯಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಇದ್ದು, ಬೈಂದೂರು ಬಿಜೆಪಿ ಕಾರ್ಯಕರ್ತರಿಗೆ ತೊಂದರೆ ನೀಡುವ ಕೆಲಸಗಳಾಗುತ್ತಿದೆ. ಬೆದರಿಕೆಗಳನ್ನು ಹಾಕುತ್ತಿರುವುದು ಗಮನಕ್ಕೆ ಬಂದಿದೆ. ಬಿಜೆಪಿ ಕಾರ್ಯಕರ್ತರ ತಂಟೆಗೆ ಬಂದರೆ ನಾನು ಸುಮ್ಮನೇ ಬಿಡುವುದಿಲ್ಲ ಎಂದು ಎಚ್ಚರಿಸಿದರು. ಈ ಹಿಂದೆ ಬೈಂದೂರು ಭಾಗದ ಬಿಜೆಪಿ ಕಾರ್ಯಕರ್ತರಿಗೆ ತೊಮದರೆ ಉಂಟು ಮಾಡುತ್ತಿದ್ದರು. ಈಗ ವಂಡ್ಸೆ ಭಾಗದ ಕಾರ್ಯಕರ್ತರ ತಂಟೆಗೆ ಕಾಂಗ್ರೆಸ್ ಹೋಗುತ್ತಿದೆ. ಇದನ್ನು ಇಲ್ಲಿಗೇ ನಿಲ್ಲಿ ಇಲ್ಲದೇ ಇದ್ದರೆ ನಾಯಕರ ಹಗರಣಗಳನ್ನು ಬಯಲಿಗೆಲೇಯಬೇಕಾಗುತ್ತದೆ ಎಂದರು. ಕಾರ್ಯಕರ್ತರು ದೇಶದ ಪ್ರಜೆಗಳು. ಅವರೂ ಅವರ ಮನೆ ಸಂಸಾರದ ಹೊರೆ ಹೊತ್ತಿದ್ದಾರೆ. ಸಿದ್ಧಾಂತಗಳ ಮೇಲೆ ಬೇರೆ ಬೇರೆ ರಾಜಕೀಯ ಪಕ್ಷಗಳಲ್ಲಿದ್ದಾರೆ. ಆದರೆ ಇದನ್ನು ಮರೆತು ಕಾಂಗ್ರೆಸ್ ಬಿಜೆಪಿ ಕಾರ್ಯಕರ್ತರನ್ನು ಟಾರ್ಗೆಟ್ ಮಾಡುತ್ತಿದೆ ಎಂದು ಆಪಾದಿಸಿದರು.
16 ದಿನಗಳ ಸಮೃದ್ಧ ನಡಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಬೈಂದೂರು ವಿಧಾನಸಭಾ ಕ್ಷೇತ್ರದ ಹಳ್ಳಿಗಳಿಗೆ ಲೋಕಸಭಾ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಜೊತೆಗೂಡಿ ನಡಿಗೆ ಆರಂಭಿಸಲಾಗುವುದು. ಪ್ರತೀ ಬೂತ್ ಮಟ್ಟದಲ್ಲಿರುವ ಸಮಸ್ಯೆಗಳನ್ನು ಮನಗಂಡು ಮುಂದಿನ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಪ್ರತೀ ಹಳ್ಳಿಗಳಿಗೂ ನಡೆದು ಹೋಗಿ ಅಲ್ಲಿನ ಸಮಸ್ಯೆಗಳನ್ನು ಆಲಿಸಲಾಗುತ್ತದೆ. ಪ್ರವಾಸೋದ್ಯ, ಶಿಕ್ಷಣ, ಆರೋಗ್ಯ, ಕೃಷಿ, ಸೇತುವೆಗಳು, ಕುಡಿಯುವ ನೀರು ಹೀಗೇ ಎಲ್ಲಾ ದಿಕ್ಕಿನಲ್ಲಿಯೂ ಬೈಂದೂರನ್ನು ಸಮೃದ್ಧಗೊಳಿಸುವ ಹೋರಾಟಕ್ಕೆ ಎಲ್ಲರ ಸಹಕಾರ ಬೇಕಾಗಿದೆ ಎಂದರು. ಕಾಂಗ್ರೆಸ್ ಪಕ್ಷದ ನಾಯಕರು ಇತ್ತೀಚಿನ ದಿನಗಳಲ್ಲಿ ಬಿಜೆಪಿ ಕಾರ್ಯಕರ್ತರ ತಂಟೆಗೆ ಬರುತ್ತಿದ್ದು, ಇದನ್ನು ಸಹಿಸುವುದಿಲ್ಲ ಎಂದೂ ಇದೇ ಸಂದರ್ಭ ಎಚ್ಚರಿಸಿದರು.
ಈ ಸಂದರ್ಭ ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಚುನಾವಣಾ ಉಸ್ತುವಾರಿ ಭಾನುಪ್ರಕಾಶ್, ಮುಖಂಡರಾದ ಅಶೋಕ ಮೂರ್ತಿ, ಜಿಲ್ಲಾ ಮುಖಂಡ ಸದಾನಂದ ಉಪ್ಪಿನಕುದ್ರು, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಪ್ರಿಯದರ್ಶಿನಿ ದೇವಾಡಿಗ, ಬೈಂದೂರು ಮಂಡಲ ಕಾರ್ಯದರ್ಶಿ ಮಹೇಂದ್ರ ಪೂಜಾರಿ, ಉಮೇಶ್ ಶೆಟ್ಟಿ ಕಲ್ಗದ್ದೆ, ಕೋಶಾಧಿಕಾರಿ ಗಣೇಶ್ ಗಾಣಿಗ, ಬಿಜೆಪಿ ಜಿಲ್ಲಾ ಕೈಗಾರಿಕಾ ಪ್ರಕೋಷ್ಟ ಸಂಚಾಲಕ ಬಿ.ಎಸ್.ಸುರೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
