ಕುಂದಾಪುರ: ಸರ್ಕಾರೀ ನೌಕರರ ಸುಸಜ್ಜಿತ ಸಭಾಭವನ ಮುಂದಿನ ಗುರಿ – ಡಾ. ನಾಗೇಶ್
ಹಲವು ವರ್ಷಗಳ ಬಳಿಕ ನಡೆಯಿತು ಮೊದಲ ಮಹಾಸಭೆ
ಕುಂದಾಪುರ: ತಾಲೂಕು ಸರ್ಕಾರೀ ನೌಕರರ ಸಂಘವು ಹಲವಾರು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದೆ. ಸಂಘದ ಎಲ್ಲಾ ಸದಸ್ಯರು ಅಭಿವೃದ್ದಿಯ ಚಿಂತನೆಯೊಂದಿಗೆ ಸಂಘದಲ್ಲಿ ಪಾಲ್ಗೊಳ್ಳುತ್ತಿರುವುದು ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ಸಂಘವು ಸುಸಜ್ಜಿತ ಸಭಾಭವನವನ್ನು ಹೊಂದುವತ್ತ ಪ್ರಾಮಾಣಿಕ ಕೆಲಸ ಮಾಡಲಿದೆ ಎಂದು ಕುಂದಾಪುರ ತಾಲೂಕು ಸರ್ಕಾರೀ ನೌಕರರ ಸಂಘದ ಅಧ್ಯಕ್ಷ, ಕುಂದಾಪುರ ಸರ್ಕಾರೀ ತಾಲೂಕು ಆಸ್ಪತ್ರೆಯ ಜನರಲ್ ಫಿಸಿಷಿಯನ್ ಡಾ. ನಾಗೇಶ್ ಹೇಳಿದರು.




ಅವರು ಭಾನುವಾರ ಕುಂದಾಪುರ ಸರ್ಕಾರೀ ಪದವಿ ಪೂರ್ವ ಕಾಲೇಜಿನ ಲಕ್ಷ್ಮೀ ನರಸಿಂಹ ರೋಟರಿ ಸಭಾಭವನನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕುಂದಾಪುರ ತಾಲೂಕು ಸರ್ಕಾರೀ ನೌಕರರ ಸಂಘದ 2024-25ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾನಾಡಿದರು.




ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ (ರಿ.) ಇದರ ಉಡುಪಿ ಜಿಲ್ಲಾಧ್ಯಕ್ಷ ಹಾಗೂ ರಾಜ್ಯ ಉಪಾಧ್ಯಕ್ಷ ಅಂಪಾರು ದಿನಕರ ಶೆಟ್ಟಿ ಉದ್ಘಾಟಿಸಿ, ಸರಕಾರದ ಮಟ್ಟದಲ್ಲಿ ಆಗದ ಕೆಲಸ ಈಗ ಸಾಧಿಸಲಾಗಿದೆ. ಮಹಿಳಾ ನೌಕರರಿಗೆ ತಿಂಗಳ ರಜೆ ಸಹಿತ ಅನೇಕ ಹಿತಕರ ಕೆಲಸ ಮಂಜೂರಾಗಿದೆ ಎಂದು ಕರ್ನಾಟಕ ಸರಕಾರಿ ನೌಕರರ ಸಂಘ ಜಿಲ್ಲಾಧ್ಯಕ್ಷ ಹಾಗೂ ರಾಜ್ಯ ಉಪಾಧ್ಯಕ್ಷ ದಿನಕರ ಕೆ. ಶೆಟ್ಟಿ ಅಂಪಾರು ಹೇಳಿದರು. ಸಂಘದ ತಾಲೂಕು ಕಾರ್ಯದರ್ಶಿ ಶೇಖರ ಪೂಜಾರಿ, ಕೋಶಾಧಿಕಾರಿ ಕಾಂತರಾಜು, ಹಿರಿಯ ಉಪಾಧ್ಯಕ್ಷರಾದ ಪರಶುರಾಮ ಎಮ್. ಎಮ್., ನಿತ್ಯಾನಂದ ಶೆಟ್ಟಿ, ಉಪಾಧ್ಯಕ್ಷರುಗಳಾದ ಭಾಸ್ಕರ ಪೂಜಾರಿ ವಿಜೇತ ಕುಮಾರ್, ಬೈಂದೂರು ತಾಲೂಕು ಸಂಘದ ಅಧ್ಯಕ್ಷ ಶೇಖರ ಪೂಜಾರಿ, ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರೇಮಾನಂದ, ಬ್ರಹ್ಮಾವರ ಸಂಘದ ಅಧ್ಯಕ್ಷ ರವಿ, ಕಾಪು ಸಂಘದ ಅಧ್ಯಕ್ಷ ಬಸವರಾಜ್, ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಆನಂದ ಜತ್ತನ್ನ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಧರ್ಮೇಂದ್ರ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.






ಇದೇ ಸಂದರ್ಭ ಮೂವತ್ತೆರಡು ಮಂದಿ ನಿವೃತ್ತ ಸರ್ಕಾರಿ ನೌಕರರಿಗೆ ಗೌರವಿಸಲಾಯಿತು. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಶೇ. 90ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತತಿಸಲಾಯಿತು. ಸಂಘದ ಹಿರಿಯ ಉಪಾಧ್ಯಕ್ಷ ನಿತ್ಯಾನಂದ ಶೆಟ್ಟಿ ಸ್ವಾಗತಿಸಿದರು. ಪ್ರಭಾವತಿ ಮತ್ತು ಶ್ಯಾಮಲಾ ಪ್ರಾರ್ಥಿಸಿದರು. ಗೋಪಾಲಕೃಷ್ಣ ಎನ್ ಪೂಜಾತಿ ವಂದಿಸಿದರೆ ಗಣೇಶ್ ಶೆಟ್ಟಿ ಮೊಳಹಳ್ಳಿ ಮತ್ತು ಪ್ರತಾಪ್ ಕುಮಾರ್ ಶೆಟ್ಟಿ ವಂಡ್ಸೆ ಕಾರ್ಯಕ್ರಮ ನಿರೂಪಿಸಿದರು.
