ಜಗತ್ತಿನಲ್ಲಿ ಫ್ಯಾಸಿಸಂ ಮತ್ತು ಡಿಕ್ಟೇಟರ್ಶಿಪ್ ನ ಮುಂದುವರಿದ ರೂಪ ನೋಡುತ್ತಿದ್ದೇವೆ – ಆರೀಫ್ ರಾಜಾ ಆತಂಕ
ಕುಂದಾಪುರ: ಜಗತ್ತಿನಲ್ಲಿ ನಾವು ಫ್ಯಾಸಿಸಂ ಮತ್ತು ಡಿಕ್ಟೇಟರ್ಶಿಪ್ ನ ಮುಂದುವರಿದ ರೂಪ ನೋಡುತ್ತಿದ್ದೇವೆ. ಇಂದು ನಾವು ಯಾವುದೇ ಕಲೆ ಸಾಹಿತ್ಯ ಅಥವಾ ಸಂಗೀತ ಪ್ರಾಕಾರಗಳನ್ನು ನೋಡುವಾಗ ಸೌಂದರ್ಯ ಮೌಲ್ಯ ಮತ್ತು ಮಾನವ ಮೌಲ್ಯವನ್ನು ಹುಡುಕಬೇಕು. ಈಗ ಮೌಲ್ಯಗಳ ಕೊರತೆ ಹೆಚ್ಚಾಗಿದೆ. ಮೌಲ್ಯಗಳ ಸೃಷ್ಟಿ ಯಾರಿಂದ? ಪತಂಗವನ್ನುಕೊಂದಾಗ ಇರುವ ಮರುಕ ಜಿರಲೆ ಕೊಂದಾಗ ಯಾಕೆ ಬರಲ್ಲ ಎನ್ನುವ ಪ್ರಶ್ನೆಗೆ ನಾವು ಉತ್ತರ ಕಂಡುಕೊಳ್ಳಬೇಕಾದ ಅನಿವಾರ್ಯ ಸ್ಥಿತಿಯಲ್ಲಿ ನಾವಿದ್ದೇವೆ ಎಂದು ಸಾಮಾಜಿಕ ಚಿಂತಕ ಆರೀಫ್ ರಾಜಾ ಹೇಳಿದರು.



ಅವರು ಭಾನುವಾರ ಕುಂದಾಪುರದ ಹೆಂಚು ಕಾರ್ಮಿಕರ ಭವನದಲ್ಲಿ ಸಮುದಾಯ ಕುಂದಾಪುರ, ಸಮುದಾಯ 50 ಸಿದ್ಧತಾ ಸಮಿತಿ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ಮನುಷ್ಯತ್ವದೆಡೆಗೆ ಸಮುದಾಯದ ಜಾಥಾ – ಬಹುಭಾಷಾ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.



ಹಿರಿಯ ಕವಿ, ಬರಹಗಾರ ಮತ್ತು ಪತ್ರಕರ್ತ ಬಿ.ಎಂ.ಬಶೀರ್ ಉದ್ಘಾಟಿಸಿದರು. ಬಾಬು ಪಾಂಗಾಳ (ಕೊರಗ ಭಾಷೆ), ರೊನಿ ಕ್ರಾಸ್ತಾ ಕೆಲರಾಯ್ (ಕೊಂಕಣಿ), ರೇಣುಕಾ ರಮಾನಂದ (ಕನ್ನಡ), ಆತ್ರಾಡಿ ಅಮೃತಾ ಶೆಟ್ಟಿ (ತುಳು), ವಿಲ್ಸನ್ ಕಟೀಲ್ (ಕನ್ನಡ), ರವೀಂದ್ರನ್ ಪಾಡಿ (ಮಲಯಾಳಂ), ಫಾತಿಮಾ ರಲಿಯಾ (ಕನ್ನಡ), ಸುಮಿತ್ ಮೇತ್ರಿ (ಕನ್ನಡ), ಜೋಸೆಫ್ ಮಲ್ಲಾಡಿ ಧಾರವಾಡ (ಕನ್ನಡ) ಕವನಗಳನ್ನು ವಾಚಿಸಿದರು.



ಜನವಾದಿ ಪ್ರಕಾಶನ ಗುಂಡ್ಮಿ ಇದರ ಕೆ.ಕಮಲಾ ಮಯ್ಯ, ಸಮುದಾಯ 50 ಸ್ವಾಗತ ಸಮಿತಿ ಕಾರ್ಯದರ್ಶಿ ಗುಂಡಣ್ಣ ಸಿ.ಕೆ., ಸಮುದಾಯ ಕರ್ನಾಟಕದ ಪ್ರಧಾನ ಕಾರ್ಯದರ್ಶಿ ಮನೋಜ್ ವಾಮಂಜೂರು ಹಾಗೂ ಸಮುದಾಯ ಕುಂದಾಪುರದ ಸದಸ್ಯರು ಉಪಸ್ಥಿತರಿದ್ದರು.



ವಾಸುದೇವ ಗಂಗೇರ, ರಮೇಶ ಗುಲ್ವಾಡಿ, ಗಣೇಶ ಶೆಟ್ಟಿ ನಿರ್ವಹಿಸಿದರು. ಉದಯ ಗಾಂವಕರ್ ಸಂಯೋಜಿಸಿದರು. ಬಳಿಕ ಸಂಜೆ ಸಮುದಾಯ ಕಲಾವಿದರಿಂದ ವಾಸುದೇವ ಗಂಗೇರ ನಿರ್ದೇಶನದ ಕೊರಳಿನಿಂದ ಬೆರಳಿಗೆ ಎಂಬ ಕವಿತೆಗಳ ರಂಗಾಭಿವ್ಯಕ್ತಿ ಪ್ರದರ್ಶನ ಕಂಡಿತು.


