BlogEconomyEducationEntertainmentFashionHighlightsHuman storiesLifestyleLocal newsOthersState newsSuccess storiesTop StoriesTrending

ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ರಜತ ಸಂಭ್ರಮ ಸಮಾರಂಭ ಸಂಪನ್ನ

Aware others:

ಕುಂದಾಪುರ : ಬಡ ಮೀನುಗಾರರ ಮಹಿಳೆಯರ ಸಾಲಮನ್ನಾ ಆಗಬೇಕೆಂಬ ಒಕ್ಕೊರಲ ಕೂಗಿನಿಂದ ಸಿದ್ಧರಾಮಯ್ಯ ಮುಖ್ಯಮಂತ್ರಿ ಆಗಿದ್ದ ಸಂದರ್ಭ ಜಯಪ್ರಕಾಶ್ ಹೆಗ್ಡೆ ಅವರ ಸಹಕಾರದಿಂದ ಮೀನುಗಾರ ಮಹಿಳೆಯರ ಸಾಲ ಮನ್ನಾ ಮಾಡಲಾಗಿದೆ. ಸಮಾಜ ಒಳ್ಳೆಯದಾದಾಗ ಒಳ್ಳೆಯದಾಗಿದೆ ಎಂಬ ಕೃತಜ್ಞತಾ ಭಾವನೆ ಇಟ್ಟುಕೊಳ್ಳಬೇಕು. ಸೊಸೈಟಿ ಅಂದರೆ ಮೂಗು ಮುರಿಯುತ್ತಿದ್ದವರು ಈಗ ಸೊಸೈಟಿ ಮೂಲಕ ಬಹಳಷ್ಟು ಅಭಿವೃದ್ಧಿ ಸಾಧಿಸಲು ಸಾಧ್ಯವಾಗಿದೆ ಎಂದು ಉಡುಪಿ ಜಿ.ಶಂಕರ ಫ್ಯಾಮಿಲಿ ಟ್ರಸ್ಟ್ನ ಮುಖ್ಯ ಪ್ರವರ್ತಕ ನಾಡೋಜ ಡಾ.ಜಿ.ಶಂಕರ ಹೇಳಿದರು.

ಅವರು ಹೆಮ್ಮಾಡಿಯ ಜಯಶ್ರೀ ಸಭಾಭವನದಲ್ಲಿ ಭಾನುವಾರ ಜರಗಿದ ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ರಜತ ಸಂಭ್ರಮ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಹಳಷ್ಟು ಕಷ್ಟಪಟ್ಟು ಮೀನುಗಾರರು ಸೇರಿ ಎಲ್ಲಾ ಮೀನುಗಾರರು ಸಂಘದಲ್ಲಿ ಹಣ ತೊಡಗಿಸಿದ್ದಾರೆ. ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ ಉದಯ ಕುಮಾರ್ ಹಟ್ಟಿಯಂಗಡಿ ನೇತೃತ್ವದಲ್ಲಿ ಈ ಬ್ಯಾಂಕ್ ಸದೃಢವಾಗಿ ಮೂಡಿ ಬಂದಿದೆ. ಮೀನುಗಾರರ ಪರಿಸ್ಥಿತಿ ಬಹಳ ಗಂಭೀರವಾಗಿದೆ. ನಾವೆಲ್ಲರೂ ಮೀನುಗಾರಿಕೆ ಮೇಲೆ ಅವಲಂಬಿತರಾಗಿರುವುದರಿಂದ ಇಂತಹ ಬ್ಯಾಂಕುಗಳು ಬಹಳಷ್ಟು ಸಹಕಾರಿಯಾಗಿವೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ.ಎಂ. ಎನ್. ರಾಜೇಂದ್ರ ಕುಮಾರ್ ಮಾತನಾಡಿ, ಈ ಸಮಾರಂಭ ಮೀನುಗಾರರ ಚಳವಳಿಗೆ ನಾಂದಿಯಾಗಲಿದೆ. ಮೀನುಗಾರರು ಕಷ್ಟಜೀವಿಗಳು, ಮೀನುಗಾರರಿಗೆ ಎಲ್ಲರಿಗಿಂತಲೂ ಹೆಚ್ಚು ಸಹಾಯ ಮಾಡಬೇಕಾಗುತ್ತದೆ. ಕಷ್ಟ ಜೀವಿಗಳ ಸಂಸ್ಥೆಯ ಭೂಮಿ ಬೇರೆಯವರಿಗೆ ಹೋಗಬಾರದೆಂಬ ದೃಷ್ಟಿಯಿಂದ ಎಸ್‌ಸಿಡಿಸಿಸಿ ಬ್ಯಾಂಕಿನ ಅಧೀನದಲ್ಲಿದ್ದ ಮೀನುಗಾರರ ಮಹಾಮಂಡಲದ ಭೂಮಿಯನ್ನು ಅವರಿಗೆ ವಾಪಾಸ್ ನೀಡಲಾಗಿದೆ.  ಉಡುಪಿ ಜಿಲ್ಲೆಯಲ್ಲೇ ಕಾರ್ಯವ್ಯಾಪ್ತಿ ವಿಸ್ತರಿಸಿ ಕೆಲಸ ಮಾಡಬೇಕು. ಈ ಸಂಸ್ಥೆ ಒಂದು ಜಿಲ್ಲಾ ಮಟ್ಟದ ಸಂಸ್ಥೆಯಾಗಿ ಮೂಡಿಬರಬೇಕಿದೆ ಎಂದು ಹೇಳಿದ ಅವರು, ಸಹಕಾರಿ ಕ್ಷೇತ್ರದಲ್ಲಿ ಒಬ್ಬ ನೌಕರನಿಗೆ ಸಹಕಾರ ರತ್ನ ಪ್ರಶಸ್ತಿ ದೊರೆತಿದ್ದರೆ ಅದು ಉದಯ ಕುಮಾರ್ ಹಟ್ಟಿಯಂಗಡಿ ಮತ್ತು ಅವರು ಮಾಡಿದ ಕೆಲಸಕ್ಕೆ. ಈ ಸಂಸ್ಥೆಯನ್ನು ಬಲಾಢ್ಯವಾಗಿ ಬೆಳೆಸಿದ್ದಾರೆ. ಈ ಸಂಸ್ಥೆಯು ಮುಂದಿನ ಆರ್ಥಿಕ ವರ್ಷದೊಳಗೆ 100 ಕೋಟಿ ಠೇವಣಾತಿ ಗುರಿಯನ್ನು ಹೊಂದಬೇಕು. ಆ ಸಂದರ್ಭ ಬಂಗಾರದ ಪದಕ ನೀಡಿ ಸನ್ಮಾನ ಮಾಡುತ್ತೇನೆ ಎಂದು ಹೇಳಿದರು.

ಕೋಟ ಗೀತಾನಂದ ಫೌಂಡೇಶನ್‌ನ ಪ್ರವರ್ತಕ ಆನಂದ ಸಿ.ಕುಂದರ್ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಇದೇ ಸಂದರ್ಭ ನಾಡೋಜ ಡಾ.ಜಿ.ಶಂಕರ ಅವರಿಗೆ ಮತ್ಸ್ಯಜ್ಯೋತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ.ಎಂ. ಎನ್. ರಾಜೇಂದ್ರ ಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಂಘದ ಮಾಜಿ ಅಧ್ಯಕ್ಷರನ್ನು ಗೌರವಿಸಲಾಯಿತು.

ದ.ಕ. ಮೊಗವೀರ ಮಾಹಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಮೊಗವೀರ ಮಾಹಜನ ಸಂಘ ಬಗ್ವಾಡಿ ಹೋಬಳಿ ಅಧ್ಯಕ್ಷ ಸಂತೋಷ್ ಪುತ್ರನ್, ಮೊಗವೀರ ಮಾಹಜನ ಸಂಘ ಮುಂಬೈ ಮಾಜಿ ಅಧ್ಯಕ್ಷ ಗೋಪಾಲ ಎಸ್.ಪುತ್ರನ್, ಕುಂದಾಪುರ ಚಿನ್ಮಯಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಉಮೇಶ್ ಪುತ್ರನ್, ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಮಹೇಶ ಹೆಗ್ಡೆ, ಸಹಕಾರಿ ಸಂಘಗಳ ಉಪನಿಬಂಧಕಿ ಕೆ.ಆರ್. ಲಾವಣ್ಯ, ಉಡುಪಿ ಜಿಲ್ಲೆ ಮೀನುಗಾರಿಕಾ ಜಂಟಿ ನಿರ್ದೇಶಕ ಕುಮಾರಸ್ವಾಮಿ ಬಿ.ವಿ., ಹೋಟೆಲ್ ಉದ್ಯಮಿ ಜಗದೀಶ ಶೆಟ್ಟಿ, ಬೆಂಗಳೂರು ಮೊಗವೀರ ಸಂಘದ ಅಧ್ಯಕ್ಷ ಶಂಕರ ಕುಂದರ್, ಕಟ್‌ಬೇಲ್ತೂರು ಭದ್ರಮಹಾಕಾಳಿ ದೇವಸ್ಥಾನದ ಅಧ್ಯಕ್ಷ ಕೆ.ಆನಂದ ಶೆಟ್ಟಿ, ಹೆಮ್ಮಾಡಿ ಪಂಚಗಂಗಾ ರೈ.ಸೇ.ಸ.ಸಂಘದ ಅಧ್ಯಕ್ಷ ಸಂತೋಷ ಕುಮಾರ್ ಶೆಟ್ಟಿ, ಉಡುಪಿ ಜಿಲ್ಲೆ ಮೊಗವೀರ ಯುವ ಸಂಘಟನೆ ಅಧ್ಯಕ್ಷ ಜಯಂತ ಅಮೀನ್ ಕೋಡಿ, ಸಂಘದ ನಿರ್ದೇಶಕರು ಉಪಸ್ಥಿತರಿದ್ದರು.

ಸಂಘದ ಅಧ್ಯಕ್ಷ ರಾಜೀವ ಎನ್.ಶ್ರೀಯಾನ್ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉದಯಕುಮಾರ್ ಹಟ್ಟಿಯಂಗಡಿ ಪ್ರಾಸ್ತಾವಿಸಿದರು. ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರ್ವಹಿಸಿದರು.


Aware others:

Leave a Reply

Your email address will not be published. Required fields are marked *

error: Content is protected !!