ಬ್ರಹ್ಮಾವರ: ದೇಶದಲ್ಲಿ ನಡೆಯುತ್ತಿರುವ ಸರ್ವಾಧಿಕಾರ ಧೋರಣೆ, ಮನುವಾದ ಖಂಡನೀಯ – ಸುಂದರ್ ಮಾಸ್ತರ್
ಬ್ರಹ್ಮಾವರದಲ್ಲಿ ದಸಂಸದಿಂದ ಶೋಷಿತಜನ ಜಾಗೃತಿ ಸಮಾವೇಶ
ಕುಂದಾಪುರ: ದೇಶದಲ್ಲಿ ಸರ್ವಾಧಿಕಾರ ಧೋರಣೆ ತಾಂಡವವಾಡುತ್ತಿದೆ. ಆರೆಸ್ಸೆಸ್ ದಲಿತರ ಮೇಲೆ ನಡೆಸುತ್ತಿರುವ ದೌರ್ಜನ್ಯ ದೇಶದ ಆರ್ಥಿಕ ವ್ಯವಸ್ಥೆಯ ಮೇಲೆ ನಡೆಸುತ್ತಿರುವ ಪ್ರಹಾರವಾಗಿದೆ. ಮನುವಾದದ ಹೇರಿಕೆಗಾಗಿ ಸಂವಿಧಾನದ ಮೇಲೆ ನಡೆಯುತ್ತಿರುವ ಆರೆಸ್ಸೆಸ್ ಪ್ರೇರಿತ ಕೇಂದ್ರ ಸರ್ಕಾರದ ದಬ್ಬಾಳಿಕೆಯನ್ನು ದಲಿತ ಸಂಘಟನೆಗಳು ಖಂಡಿಸುತ್ತವೆ. ಈ ನಿಟ್ಟಿನಲ್ಲಿ ದಲಿತರು, ಅಲ್ಪಸಂಖ್ಯಾತರು ಹಿಂದುಳಿದ ವರ್ಗದ ಸಂವಿಧಾನ ಪ್ರೇಮಿಗಳಿಂದ ದೇಶಾದ್ಯಂತ ಪ್ರತಿಭಟನೆ ನಡೆಸಲಿದ್ದಾರೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ತರ್ ಹೇಳಿದರು.



ಅವರು ಭಾನುವಾರ ಬ್ರಹ್ಮಾವರದ ಹೋಟೆಲ್ ಆಶ್ರಯ ಹೋಟೆಲ್ ಸಭಾಭವನದಲ್ಲಿ ಹಾಕಲಾದ ಬಿರ್ತಿ ನಾರಾಯಣ ಮಾಸ್ತರ್ ವೇದಿಕೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಉಡುಪಿ ಜಿಲ್ಲಾ ಸಮಿತಿಯ ಬ್ರಹ್ಮಾವರ ತಾಲೂಕು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ನಡೆದ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾದ ಶೋಷಿತಜನ ಜಾಗ್ರತಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.






ಉಡುಪಿ ಜಿಲ್ಲಾ ಸಮಿತಿಯ ಪ್ರಧಾನ ಸಂಚಾಲಕ ವಕೀಲ ಮಂಜುನಾಥ ಗಿಳಿಯಾರ್ ಪ್ರಾಸ್ತಾವಿಸಿ, ಬ್ರಹ್ಮಾವರ ದಲಿತ ಚಳುವಳಿಯ ನಿಜ ತೊಟ್ಟಿಲು. ಇಲ್ಲಿಯ ಜನ ವಿದ್ಯಾವಂತರು. ಉದ್ಯೋಗಸ್ಥರು ಮತ್ತು ಸ್ವಾಭಿಮಾನಿಗಳು. ಬ್ರಹ್ಮಾವರ ತಾಲೂಕಿನ ಕೋಟ, ಕೊಕ್ಕರ್ಣೆ, ಸೈಬರ ಕಟ್ಟೆ, ಹಂಗಾರಕಟ್ಟೆ,ಬಿಲ್ಲಾಡಿ, ಹಾವಂಜೆ ಮತ್ತು ಸಾಸ್ತಾನ ಭಾಗಗಳು ಒಂದು ಕಾಲದಲ್ಲಿ ಚಳುವಳಿಯ ಭದ್ರ ಬೇರುಗಳಾಗಿದ್ದವು. ಇತ್ತೀಚಿನ ದಿನಗಳಲ್ಲಿ ಕಾಲದ ಕಾಲಡಿಗೆ ಸಿಕ್ಕಿದ ಚಳುವಳಿಗಳಿಗೆ ಹಿನ್ನಡೆಯಾದರೂ ಒಳಗಿನ ಹೋರಾಟದ ಜ್ವಾಲಾಗ್ನಿ ಹಾಗೇ ಉಳಿದುಕೊಂಡಿದೆ. ಈ ನಿಟ್ಟಿನಲ್ಲಿ ಚಳುವಳಿಯ ಗತ ವೈಭವವನ್ನು ಮತ್ತೆ ಮುನ್ನೆಲೆಗೆ ತರಬೇಕಾಗಿದೆ ಎಂದರು.



ಉದ್ಯಮಿ ಪ್ರಸಾದ್ ರಾಜ್ ಕಾಂಚನ್ ಮಾತನಾಡಿ, ಮನುಷ್ಯತ್ವದ ಜಾತಿಯಾಗಬೇಕೇ ಜಾತಿ ಆಧಾರಿತ ಸಮಯದಾಯವಾಗಬಾರದು. ಅದಕ್ಕಾಗಿ ಇರುವ ಮೀಸಲಾತಿಯನ್ನು ಸದುಪಯೋಗಪಡಿಸಿಕೊಂಡು ಶೈಕ್ಷಣಿಕವಾಗಿ ಮುಂದೆ ಬರಲು ಪೂರಕ ವಾತಾವರಣ ಸೃಷ್ಟಿಸಿ ವಿದ್ಯಾವಂತರನ್ನಾಗಿ ಮಾಡುವ ಮೂಲಕ ಮುಖ್ಯವಾಹಿನಿಗೆ ಬರುವಂತೆ ಮಾಡಿದಾಗ ದೇಶದಲ್ಲಿ ಸಮಾನತೆ ಸಾಧ್ಯ ಎಂದರು. ಪ್ರತಿಯೊಬ್ಬರು ಭಾರತದ ಸಂವಿಧಾನದ ಪುಸ್ತಕ ಓದುವ ಪ್ರತಿಜ್ಞೆ ಮಾಡಬೇಕು ಎಂದರು.



ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ. ಗಫೂರ್ ಮಾತನಾಡಿ, ಎಲ್ಲರೂ ಒಂದಾಗಿ ಪ್ರೀತಿ, ಸಹಬಾಳ್ವೆಯಿಂದ ಬದುಕಲು ಡಾ. ಬಿ.ಆರ್ ಅಂಬೇಡ್ಕರ್ ನೀಡಿದ ಸಂವಿಧಾನ ಅವಕಾಶ ಮಾಡಿಕೊಟ್ಟಿದೆ. ಆದರೆ ಸಂವಿಧಾನ, ಪ್ರಜಾಪ್ರಭುತ್ವವನ್ನು ಅಲುಗಾಡಿಸುವ ಹುನ್ನಾರ ತಡೆಯಲು ಸಂಘಟಿತ ಚಳುವಳಿಯಿಂದ ಮಾತ್ರ ಸಾಧ್ಯ. ದಸಂಸ ಸಂಘಟನೆ ಹೋರಾಟಗಳ ಮೂಲಕ ಧ್ವನಿಯಿಲ್ಲದವರ ಧ್ವನಿಯಾಗುತ್ತಿದೆ. ಯುವಕರು ಸಂಘಟಿತರಾಗಿ ಸನ್ಮಾರ್ಗದಲ್ಲಿ ನಡೆದಾಗ ಸಮಸಮಾಜ ನಿರ್ಮಾಣವಾಗುತ್ತದೆ ಎಂದರು.



ಕರ್ನಾಟಕ ದಸಂಸ ಬ್ರಹ್ಮಾವರದ ನಿಯೋಜಿತ ಸಂಚಾಲಕರಾದ ಶ್ಯಾಮಸುಂದರ್ ತೆಕ್ಕಟ್ಟೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ನಡೆಯಿತು. ಇದೇ ಸಂದರ್ಭದಲ್ಲಿ ಹಿರಿಯ ದಲಿತ ಪರ ಹೋರಾಟಗಾರರು ಮತ್ತು ಸಾಧಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೆ ಮುನ್ನ ಅತಿಥಿಗಳನ್ನು ಬ್ರಹ್ಮಾವರ ವೃತ್ತದಿಂದ ಮೆರವಣಿಗೆಯಲ್ಲಿ ಅತಿಥಿಗಳನ್ನು ವೇದಿಕೆಗೆ ಕರೆತರಲಾಯಿತು.




ಕಾರ್ಯಕ್ರಮದಲ್ಲಿ ಮುನೀರ್ ಕಾಟಿಪಳ್ಳ, ನವೀನ್ ಸೂರಿಂಜೆ, ಎಸ್. ನಾರಾಯಣ್, ಅಲ್ಪಸಂಖ್ಯಾತರ ನಿಗಮದ ಪ್ರಶಾಂತ್ ಜತ್ತನ್, ಕರ್ನಾಟಕ ದಸಂಸ ಅಂಬೇಡ್ಕರ್ ವಾದ ಇದರ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ, ಜಿಲ್ಲಾ ಸಂಘಟನಾ ಸಂಚಾಲಕರಾದ ಅಣ್ಣಪ್ಪ ನಕ್ರೆ, ಮಂಜುನಾಥ ನಾಗೂರು, ಸುರೇಶ್ ಹಕ್ಲಾಡಿ, ಅಣ್ಣಪ್ಪ ಮಾಸ್ತರ್ ಹೆಬ್ರಿ, ಜಿಲ್ಲಾ ಕೋಶಾಧಿಕಾರಿ ಭಾಸ್ಕರ್ ನಿಟ್ಟೂರು, ಜಿಲ್ಲಾ ಸಮಿತಿ ಸದಸ್ಯ ಕುಮಾರ್ ಕೋಟ, ಕುಂದಾಪುರ ತಾಲೂಕು ಸಂಚಾಲಕ ಕೆ.ಸಿ. ರಾಜು ಬೆಟ್ಟಿನಮನೆ, ಬೈಂದೂರು ತಾ. ಸಂಚಾಲಕ ಶಿವರಾಜ್, ಕಾರ್ಕಳ ತಾ. ಸಂಚಾಲಕ ರಾಘವ ಕುಕ್ಕುಜೆ, ಉಡುಪಿ ತಾ. ಸಂಚಾಲಕ ಶಂಕರದಾಸ್ ಚೇಂಡ್ಕಳ, ಹೆಬ್ರಿ ಸಂಚಾಲಕ ದೇವು ಹೆಬ್ರಿ, ಕಾಪು ಸಂಚಾಲಕ ರಾಜೇಂದ್ರನಾಥ್, ಜಿಲ್ಲಾ ಮಹಿಳಾ ಒಕ್ಕೂಟದ ಗೀತಾ ಸುರೇಶ್ ಕುಮಾರ್, ವಸಂತಿ ಶಿವಾನಂದ್ ಮೊದಲಾದವರಿದ್ದರು. ಶಂಕರದಾಸ್, ಮಂಜುನಾಥ್ ಬಾಳ್ಕುದ್ರು ಹೋರಾಟಗೀತೆ ಹಾಡಿದರು. ಸದಾನಂದ ಹಂಗಾರಕಟ್ಟೆ, ಶರತ್ ಆರೂರು ನಿರೂಪಿಸಿ, ಸುಧಾಕರ್ ಮಾಸ್ತರ್ ಗುಜ್ಜರಬೆಟ್ಟು ವಂದಿಸಿದರು.
