ಕುಂದಾಪುರ: ಬಾವಿಗೆ ಬಿದ್ದು ಅಪ್ರಾಪ್ತ ವಿದ್ಯಾರ್ಥಿ ಅನುಮಾನಾಸ್ಪದ ಸಾವು

ಕುಂದಾಪುರ: ಶಾಲೆ ಮುಗಿಸಿ ಮನೆಗೆ ಬಂದ ವಿದ್ಯಾರ್ಥಿ ಬಾವಿಗೆ ಬಿದ್ದು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕೋಣಿ ಸಮೀಪ ನಡೆದಿದೆ.
ಇಲ್ಲಿನ ಅಗ್ನಿಶಾಮಕ ಠಾಣೆ ಬಳಿಯ ರಾಮಮಂದಿರ ದೇವಸ್ಥಾನದ ಸಮೀಪದ ನಿವಾಸಿ ಚಂದ್ರಶೇಖರ ಪೂಜಾರಿ ಹಾಗೂ ಸವಿತಾ ಎಂಬ ದಂಪತಿಗಳ ಎರಡನೇ ಪುತ್ರ ಮನಿಷ್ (14) ಎಂಬ ವಿದ್ಯಾರ್ಥಿಯೇ ಮೃತಪಟ್ಟ ದುರ್ದೈವಿ.
ಖಾಸಗಿ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿ ಮನೀಶ್ ಕಲಿಕೆಯಲ್ಲಿ ಬಹಳ ಮುಂದಿದ್ದ. ಗುರುವಾರ ಸಂಜೆ ಎಂದಿನಂತೆ ಶಾಲೆ ಮುಗಿಸಿ ಮನೆಗೆ ಬಂದಿದ್ದ ಮನೀಶ್ ಆವರಣವಿರುವ ಬಾವಿಗೆ ಬಿದ್ದು ಸಾವನ್ನಪ್ಪಿದ್ದಾನೆ. ಆದರೆ ಘಟನೆಗೆ ಸ್ಪಷ್ಟವಾದ ಕಾರಣ ತಿಳಿದು ಬಂದಿಲ್ಲ. ಮನೀಶನ ತಂದೆ ಚಂದ್ರಶೇಖರ್ ಪೂಜಾರಿ ತಲ್ಲೂರಿನಲ್ಲಿ ಸಣ್ಣ ಅಂಗಡಿಯೊಂದನ್ನು ನಡೆಸಿ ಕುಟುಂಬ ಜೀವನ ಸಾಗಿಸುತ್ತಿದ್ದಾರೆ. ಮನೀಶ್ ನ ಅಣ್ಣ ಪ್ರಥಮ ಪಿಯುಸಿಯಲ್ಲಿ ಓದುತ್ತಿದ್ದಾನೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
