ಕುಂದಾಪುರ: ಕಾಲ್ನಡಿಗೆಯಲ್ಲಿದ್ದ ಮಾಲಾಧಾರಿಗಳಿಗೆ ಬೈಕ್ ಡಿಕ್ಕಿ – ಒಬ್ಬ ಸಾವು

ಕುಂದಾಪುರ: ಅಯ್ಯಪ್ಪ ಸ್ವಾಮಿ ಚಪ್ಪರದಿಂದ ಮಂದಾರ್ತಿ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದಾಗ ಟಿವಿಎಸ್ ಎಕ್ಸೆಲ್ ಬೈಕ್ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಾಲಾಧಾರಿಗಳು ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಒಬ್ಬ ಸಾವನ್ನಪ್ಪಿದ ಘಟನೆ ಕುಂದಾಪುರ ತಾಲೂಕಿನ ತೆಕ್ಕಟ್ಟೆಯ ಕನ್ನುಕೆರೆ ಎಂಬಲ್ಲಿ ನಡೆದಿದೆ.
ಕೋಟೇಶ್ವರ ಸಮೀಪದ ಕುಂಬ್ರಿ ನಿವಾಸಿ ಸುರೇಂದ್ರ ಮೊಗವೀರ ಸಾವನ್ನಪ್ಪಿದ ದುರ್ದೈವಿ. ಭಾನುವಾರ ಮುಂಜಾನೆ ಸುಮಾರು ಹದಿನೈದು ಜನ ಮಾಲಾಧಾರಿಗಳ ತಂಡ ಕೋಟೇಶ್ವರ ಮೂಲಕ ಮಂದಾರ್ತಿ ದೇವಸ್ಥಾನಕ್ಕೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದರು. ಕನ್ನುಕೆರೆ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಎಕ್ಸೆಲ್ ಬೈಕ್ ಸುರೇಂದ್ರ ಮೊಗವೀರ ಸಹಿತ ಇಬ್ಬರು ಮಾಲಾಧಾರಿಗಳಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ಸುರೇಂದ್ರ ಮೊಗವೀರನ ತಲೆಗೆ ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲು ಸಾಗಿಸುತ್ತಿದ್ದ ವೇಳೆ ಮೃತಪಟ್ಟಿದ್ದಾರೆ. ಬೈಕ್ ಸವಾರನೂ ರಸ್ತೆಗೆ ಬಿದ್ದಿದ್ದು, ಸವಾರ ಹಾಗೂ ಮತ್ತೊಬ್ಬ ಮಾಲಾಧಾರಿ ಗಾಯಗೊಂಡಿದ್ದಾರೆ.
