ಕರಾವಳಿಯಲ್ಲಿ ಶಾಂತಿ ಕದಡಲು ಯತ್ನ ಆರೋಪ – ವಸಂತ ಗಿಳಿಯಾರ್ ವಿರುದ್ಧ ದೂರು ದಾಖಲಿಸಿದ ಕಾಂಗ್ರೆಸ್

ಕುಂದಾಪುರ: ಪ್ರಭಾಕರ ಭಟ್ ಪರ ಬ್ಯಾಟಿಂಗ್ ಮಾಡುವ ಭರದಲ್ಲಿ ಸರ್ಕಾರಕ್ಕೇ ಬೆದರಿಕೆ ಹಾಕಿದ್ದಲ್ಲದೇ ಪ್ರಚೋದನಾಕಾರಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾನೆಂದು ಆರೋಪಿಸಿ ವಸಂತ ಗಿಳಿಯಾರ್ ವಿರುದ್ಧ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಕುಂದಾಪುರ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಕಲ್ಲಡ್ಕ ಪ್ರಭಾಕರ್ ಭಟ್ ಎನ್ನುವ ಶಕ್ತಿಯನ್ನ ಕೆಣಕಿ ಉಳಿದ ಸರ್ಕಾರವಿಲ್ಲ! ಭಟ್ಟರ ಬಂಧನಕ್ಕೆ ಒತ್ತಡವಿದೆ ಎನ್ನುವ ಮಾತು ಕೇಳಿಸಿಕೊಂಡೆ.
ಕರಾವಳಿ ಕಿಡಿ ಕಿಡಿಯಾದೀತು. ಪ್ರಭಾಕರ ಭಟ್ಟರ ಪ್ರಭಾವ ಏನೂ ಎನ್ನುವುದನ್ನ ಪ್ರದರ್ಶನ ಮಾಡುವ ರಿಸ್ಕಿಗೆ ಯಾರೂ ಕೈ ಹಾಕದೇ ಇರೋದು ಸೇಫ್ ! ಕರಾವಳಿ ಕರ್ನಾಟಕ ಶಾಂತಿಯಲ್ಲಿರಲಿ ಎನ್ನುವುದು ಸಲಹೆ – #ವಸಂತ್_ಗಿಳಿಯಾರ್ ಎಂದು ತನ್ನ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದ. ಇದರಿಂದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರನ್ನು ಸರ್ಕಾರದ ವಿರುದ್ಧ ಎತ್ತಿಕಟ್ಟುವಲ್ಲಿ ಪ್ರಚೋದನೆ ನೀಡಿದ ಆರೋಪದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಮಂಗಳವಾರ ಸಂಜೆ ದೂರು ನೀಡಿದ್ದು ಕೋಮು ಪ್ರಚೋದನೆ ನಡೆಸಿ ಕರಾವಳಿಯಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿರುವ ವಸಂತ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಈ ಸಂದರ್ಭ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೃಷ್ಣ ಶೆಟ್ಟಿ ಬಜಗೋಳಿ, ಕುಂದಾಪುರ ವಿಧಾನಸಭಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಶಮಂತ್ ಕುಂದಾಪುರ, ಕಾಳವಾರ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಕೆ. ಡಿ. ಪಿ ಸದಸ್ಯ ರಮೇಶ್ ಶೆಟ್ಟಿ ವಕ್ವಾಡಿ, ಕಾಂಗ್ರೆಸ್ ಮುಖಂಡ ಸುನಿಲ್ ಪೂಜಾರಿ ಕೋಡಿ, ಕುಂದಾಪುರ ವಲಯ ಸಹಬಾಳ್ವೆ ಸಂಚಾಲಕ ರಾಮಕೃಷ್ಣ ಹೇರ್ಳೆ, ಕುಂದಾಪುರ ಪುರಸಭೆ ನಾಮ ನಿರ್ದೇಶಿತ ಸದಸ್ಯ ಅಶೋಕ್ ಸುವರ್ಣ, ಕುಂದಾಪುರ ಪುರಸಭೆ ಮಾಜಿ ಸದಸ್ಯ ಕೇಶವ ಭಟ್, ಕುಮಾರ್ ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು.
