ಆನಗಳ್ಳಿ: ದಾಖಲಾತಿ ಪೋರ್ಝರಿ ಮಾಡಿ 9&11 ಹಂಚಿಕೆ – ತಹಸೀಲ್ದಾರ್, ಪಿಡಿಒ ಹಾಗೂ ಅಧ್ಯಕ್ಷೆ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲು

ಕುಂದಾಪುರ: ಸುಳ್ಳು ದಾಖಲಾತಿಗಳನ್ನೇ ಆಧಾರವಾಗಿಟ್ಟುಕೊಂಡು ನಿವೇಶನವೊಂದಕ್ಕೆ ಭೂಪರಿವರ್ತನೆ ಮಾಡಿ, 9&11 ನೀಡಲಾಗಿದೆ ಎಂದು ಆರೋಪಿಸಿ ಆನಗಳ್ಳಿಯ ರಘುರಾಮ ನಾಯ್ಕ ಎಂಬುವರು ಹಿಂದಿನ ತಹಸೀಲ್ದಾರ್ ಶೋಭಾಲಕ್ಷ್ಮೀ, ಪಿಡಿಒ ಅನಿಲ್ ಬಿರಾದಾರ್ ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷೆ ಸವಿತಾ ಸೇರಿ ಮೂವರ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಆನಗಳ್ಳಿ ಗ್ರಾಮದ ಅಭಿಜಿತ್ ಪೂಜಾರಿ, ಎಂಬುವರ ಸ.ನಂ.189/82 ವಿಸ್ತೀರ್ಣ 07.50 ಸೆಂಟ್ಸು ಸ್ಥಳವು ವಾರಾಹಿ ಉಪ್ಪುನೀರು ನದಿಯ ದಡದಿಂದ ಕೇವಲ 23 ಮೀಟರ್ ದೂರದಲ್ಲಿದ್ದು, ಸದ್ರಿ ಸ್ಥಳವು ಸಿ.ಆರ್.ಝಡ್ ವ್ಯಾಪ್ತಿಯಲ್ಲಿ ಬರುವ ಖಾಲಿ ಸ್ಥಳವಾಗಿರುತ್ತದೆ. ಹಿಂದೆ ಸದ್ರಿ ಸ್ಥಳದಲ್ಲಿ ಉಪ್ಪು ನೀರು ತುಂಬಿಕೊಂಡು ಇದ್ದು, ತಗ್ಗು ಪ್ರದೇಶವಾಗಿತ್ತು ಮತ್ತು ಅದರಲ್ಲಿ ಈ ಹಿಂದೆ ಯಾವುದೇ ಕಟ್ಟಡ ವಗೈರೆ ಎಂದೆಂದೂ ಇದ್ದಿರುವುದಿಲ್ಲ ಎಂದು ದೂರಿದ್ದಾರೆ.

ಅಲ್ಲದೇ ಈ ಹಿಂದೆ ಉಡುಪಿ ಜಿಲ್ಲೆ, ಕುಂದಾಪುರ ತಾಲೂಕು, ಆನಗಳ್ಳಿ ಗ್ರಾಮದ ಸ.ನಂ.189/8ಸಿ ರಲ್ಲಿ 15 ಸೆಂಟ್ಟು ಸ್ಥಳವು ವಿಠಲ ಪೂಜಾರಿ, ಬಿನ್: ಹೆರಿಯ ಪೂಜಾರಿ ಎಂಬುವರಿಗೆ ಸೇರಿದ್ದು, ಸದ್ರಿ ಸ್ಥಳದಲ್ಲಿ ಈ ಹಿಂದೆ ಒಂದು ಸಣ್ಣ ಮನೆ ಕಟ್ಟಡ ಇದ್ದಿತ್ತು ಹಾಗೂ ಸದ್ರಿ ಸ್ಥಳವು ಸಹ ಸಿ.ಆರ್.ಝಡ್ ವ್ಯಾಪ್ತಿಯಲ್ಲಿ ಬರುತ್ತದೆ. ಸದ್ರಿ ಎರಡು ಸ್ಥಳಗಳು ಸುಮಾರು 100 ಮೀಟರ್ ಅಂತರದಲ್ಲಿವೆ.

ಆದರೆ ಅಭಿಜಿತ್ ಪೂಜಾರಿಯವರು ತಾನು ವಿಠಲ ಪೂಜಾರಿಯವರಿಂದ ಸ.ನಂ.189/82 ವಿಸ್ತೀರ್ಣ 07.50 ಸೆಂಟ್ಸು ಸ್ಥಳವನ್ನು ಖರೀದಿ ಮಾಡಿರುವುದಾಗಿ ಸಿ.ಆರ್.ಝಡ್ ಇಲಾಖೆಗೆ ತಪ್ಪು ಮಾಹಿತಿ ನೀಡಿದ್ದು, ವಾಸ್ತವದಲ್ಲಿ ಅಭಿಜಿತ್ ಪೂಜಾರಿಯವರು ದಿನೇಶ ಪೂಜಾರಿಯವರಿಂದ ಈ ಮೇಲೆ ಹೇಳಿದ ಸ.ನಂ.189/82 ವಿಸ್ತೀರ್ಣ 07.50 ಸೆಂಟ್ಸು ಸ್ಥಳವನ್ನು ಖರೀದಿಸಿದ್ದಾರೆ ಎನ್ನಲಾಗಿದೆ.
ಆದರೆ ಅಭಿಜಿತ್ ಪೂಜಾರಿಯವರು ಭೂಪರಿವರ್ತನೆ ಸಮಯದಲ್ಲಿ ವಿಠಲ ಪೂಜಾರಿಯವರಿಗೆ ಸ.ನಂ.189/8ಸಿ1 ರಲ್ಲಿ ವಿಸ್ತೀರ್ಣ 15 ಸೆಂಟ್ಟು ಸ್ಥಳಕ್ಕೆ ನೀಡಿರುವ ಸಿ.ಆರ್.ಝಡ್ ಎನ್.ಒ.ಸಿಯನ್ನು ದುರ್ಬಳಕೆ ಮಾಡಿಕೊಂಡು ಸ.ನಂ.189/82 ವಿಸ್ತೀರ್ಣ 07.50 ಸೆಂಟ್ಸು ಸ್ಥಳವನ್ನು ಭೂಪರಿವರ್ತನೆ ಮಾಡಲು ತಹಶೀಲ್ದಾರರು ಅಭಿಜಿತ್ ಪೂಜಾರಿಯವರೊಂದಿಗೆ ಶಾಮೀಲಾಗಿದ್ದಾರೆ ಎಂದು ತಿಳಿಸಲಾಗಿದೆ.

ಆನಂತರ ಅಭಿಜಿತ್ ಪೂಜಾರಿಯವರು ಕುಂದಾಪುರ ತಾಲೂಕು, ಆನಗಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಪಿಡಿಒ ರವರು ಎಲ್ಲರೂ ಶಾಮಿಲಾಗಿ ಅಭಿಜಿತ್ ಪೂಜಾರಿಯವರಿಗೆ ನಮೂನೆ 9 ಮತ್ತು 11ನ್ನು ನೀಡಲಾಗಿದೆ. ಯಾವುದೇ ಸರ್ಕಾರೀ ಕಂದಾಯ ಪಡೆಯದೇ ಲಕ್ಷಾಂತರ ಮೌಲ್ಯದ ಮನೆ ನಿರ್ಮಾಣಕ್ಕೆ ಅಕ್ರಮವಾಗಿ ಅವಕಾಶ ನೀಡಿದ್ದಾರೆ ಎಂದು ಉಡುಪಿ ಲೋಕಾಯುಕ್ತ ಕಚೇರಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.