ವಿದ್ಯಾರಣ್ಯ: ಸುಜ್ಞಾನ ಪಿಯು ಕಾಲೇಜಿನಲ್ಲಿ ಗೌರಿ-ಗಣೇಶ ಹಬ್ಬದ ಸಂಭ್ರಮ!

ಕುಂದಾಪುರ: ಯಡಾಡಿ ಮತ್ಯಾಡಿಯ ವಿದ್ಯಾರಣ್ಯ ಕ್ಯಾಂಪಸ್ ನಲ್ಲಿ ಸುಜ್ಞಾನ ಎಜುಕೇಶನಲ್ ಟ್ರಸ್ಟ್ ನ ವಿದ್ಯಾರಣ್ಯ ಆಂಗ್ಲಮಾಧ್ಯಮ ಶಾಲೆ ಹಾಗೂ ಸುಜ್ಞಾನ ಪಿಯು ಕಾಲೇಜಿನಲ್ಲಿ ಕಂಡು ಬಂದ ಗೌರಿ-ಗಣೇಶ ಹಬ್ಬ ಸಂಭ್ರಮದಿಂದ ನಡೆಯಿತು.

ಸುಜ್ಞಾನ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷ ಡಾ.ರಮೇಶ್ ಶೆಟ್ಟಿ ಮಾತನಾಡಿ, ಹಬ್ಬ ಹರಿದಿನಗಳು ಬಂದಾಗ ಹಾಸ್ಟೆಲ್ನಲ್ಲಿರುವ ವಿದ್ಯಾರ್ಥಿಗಳಿಗೆ ಸಾಮಾನ್ಯವಾಗಿ ಮನೆಯವರ ನೆನಪಾಗುತ್ತದೆ. ಆದರೆ ನಮ್ಮ ಸಂಸ್ಥೆಯಲ್ಲಿರುವ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಮನೆಯವರ ನೆನಪಿನಲ್ಲಿ ತಮ್ಮ ಮುಗ್ಧ ಮನಸ್ಸನ್ನು ಮುದುಡಿಸಿಕೊಳ್ಳಬಾರದು ಎಂಬ ಕಾರಣಕ್ಕೆ ತಾವು ಪ್ರತಿಯೊಂದು ಹಬ್ಬವನ್ನು ನಮ್ಮ ಸಂಸ್ಥೆಯಲ್ಲಿ ಆಚರಿಸುತ್ತೇವೆ. ಇಲ್ಲಿರುವ ಮಕ್ಕಳಿಗೆ ತಾಯಿಯ ಪ್ರೀತಿ ಕೊಡುವುದಕ್ಕೆ ನಮ್ಮಿಂದ ಸಾಧ್ಯವಾಗದೇ ಇರಬಹುದು. ಆದರೆ ತಂದೆಯ ಜವಾಬ್ದಾರಿಯನ್ನು ಮಾಡುತ್ತೇವೆ. ಅವರ ಭವಿಷ್ಯ ಕಟ್ಟುವ ಜವಾಬ್ದಾರಿಯ ಜೊತೆಗೆ ಅವರಿಗೆ ಸಂಸ್ಕೃತಿ ಹಾಗೂ ಸಂಸ್ಕಾರದ ಬಗ್ಗೆ ಅರಿವು ಮೂಡಿಸುವ ಹೊಣೆ ನಮ್ಮದು.ಮಕ್ಕಳಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೂಡ ಆಯೋಜಿಸಿದ್ದೇವೆ. ಇದರಿಂದ ವಿದ್ಯಾರ್ಥಿಗಳಿಗೆ ಕಲೆಯ ಬಗ್ಗೆ ಒಲವು ಮೂಡುತ್ತದೆ. ಮಕ್ಕಳ ಪ್ರತಿಭೆಯನ್ನು ಗುರುತಿಸಲು ಸಾಧ್ಯವಾಗುತ್ತದೆ. ಇನ್ನು ವಿದ್ಯಾರ್ಥಿಗಳು ಕಲೆಯನ್ನು ಅಸ್ವಾಧಿಸುವ ಗುಣವನ್ನು ಬೆಳೆಸಿಕೊಳ್ಳಬೇಕು. ಎಲ್ಲರೂ ಕಲಾವಿದರಾಗುವುದಕ್ಕೆ ಸಾಧ್ಯವಾಗದೇ ಇರಬಹುದು ಆದರೆ ಕಲೆಯನ್ನು ಗೌರವಿಸುವ, ಪ್ರೀತಿಸುವ ಹಾಗೂ ಪ್ರೋತ್ಸಾಹಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಇದು ಕಲಾವಿದರನ್ನು ಬೆಳೆಸುವುದಕ್ಕೆ ಸಹಾಯಮಾಡುತ್ತದೆ ಎಂದರು.

ಸಂಸ್ಥೆಯ ಖಜಾಂಚಿ ಭರತ್ ಶೆಟ್ಟಿ ಮಾತನಾಡಿ, ನಮ್ಮ ಸಂಸ್ಥೆಯಲ್ಲಿ ವಿದ್ಯೆಯ ಜೊತೆಗೆ ಪ್ರತಿಯೊಂದು ಹಬ್ಬವನ್ನೂ ಅದರ ಪದ್ಧತಿಗೆ ಅನುಗುಣವಾಗಿ ಆಚರಿಸುತ್ತೇವೆ. ಹಬ್ಬದೂಟವನ್ನು ಮನೆಮಂದಿಯ ಜೊತೆ ಕುಳಿತು ಸವಿಯುವುದಕ್ಕೆ ಆಗುತ್ತಿಲ್ಲ ಎಂಬ ವಿದ್ಯಾರ್ಥಿಗಳ ಮನಸ್ಸಿನ ಕೊರಗನ್ನು ನಿವಾರಿಸುವುದಕ್ಕೆ ನಾವು ಅವರ ಜೊತೆ ಕುಳಿತು ಒಟ್ಟಾಗಿ ಸಹಭೋಜನ ಮಾಡುತ್ತೇವೆ. ವಿದ್ಯಾರ್ಥಿಗಳು ಕೂಡ ತಮ್ಮ ಚಿತ್ತವನ್ನು ಓದಿನ ಕಡೆಗೆ ಹರಿಸಿ ಪೋಷಕರು ತಮಗಾಗಿ ಮಾಡಿದ ತ್ಯಾಗದ ಕುರಿತು ಅರಿವು ಹೊಂದಿರಬೇಕು. ಓದಿನ ವಿಷಯದಲ್ಲಿ ಯಾವುದೇ ನಿರಾಸಕ್ತಿ ತೋರದೇ ಸುಭದ್ರವಾದ ಭವಿಷ್ಯ ಕಟ್ಟಿಕೊಂಡು ಕಲಿತ ಸಂಸ್ಥೆಗೆ ತಂದೆ-ತಾಯಿಗೆ ಹಾಗೂ ದೇಶಕ್ಕೆ ಹೆಮ್ಮೆ ತರುವ ಕೆಲಸ ಮಾಡಬೇಕು ಎಂದರು.

ವಿದ್ಯಾರ್ಥಿಗಳಿಗಾಗಿ ಸಾಕಷ್ಟು ಮನೋರಂಜನಾ ಕಾರ್ಯಕ್ರಮಗಳನ್ನು ಕೂಡ ಆಯೋಜಿಸಲಾಗಿತ್ತ. ನೆರೆದಿದ್ದ ವಿದ್ಯಾರ್ಥಿಗಳು ಹಬ್ಬದ ಆಚರಣೆಯ ಜೊತೆಗೆ ಹಬ್ಬದೂಟದ ಸವಿಯುಂಡು ಸಾಂಸ್ಕೃತಿಕ ಕಾರ್ಯಕ್ರಮಗಳ ಸೊಬಗನ್ನು ಕಣ್ತುಂಬಿಕೊಂಡರು.

ಸುಜ್ಞಾನ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷ ಡಾ.ರಮೇಶ್ ಶೆಟ್ಟಿ, ಖಜಾಂಚಿ ಭರತ್ ಶೆಟ್ಟಿ, ಸಂಸ್ಥೆಯ ಪ್ರಾಂಶುಪಾಲ ರಂಜನ್ ಬಿ.ಶೆಟ್ಟಿ ಹಾಗೂ ಮುಖ್ಯೋಪಾಧ್ಯಾಯ ಪ್ರದೀಪ್ ಕೆ. ಉಪಸ್ಥಿತರಿದ್ದರು. ಶಿಕ್ಷಕಿ ಸುದಕ್ಷಿಣ ನಿರೂಪಿಸಿದರು.