ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಅವ್ಯವಹಾರ ತನಿಖೆಗೆ ಅನುಮತಿ – ಅಜಿತ್ ಕುಮಾರ್ ಶೆಟ್ಟಿ ಸ್ವಾಗತ

ಕುಂದಾಪುರ: ಬ್ರಹ್ಮಾವರದ ದಕ್ಷಿಣ ಕನ್ನಡ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಹಳೆಯ ಯಂತ್ರೋಪಕರಣಗಳ ಮಾರಾಟದಲ್ಲಿ ಸಂಭವಿಸಿದ ರೂ. 13.92 ಕೋಟಿ ನಷ್ಟದ ಅವ್ಯವಹಾರ ಕುರಿತು ತಾಂತ್ರಿಕ ಸಲಹಾ ಸಮಿತಿ ಸದಸ್ಯರ ವಿರುದ್ಧ ಕ್ರಿಮಿನಲ್ ಪ್ರಾಸಿಕ್ಯೂಷನ್ ಅನುಮೋದನೆ ನೀಡಿರುವ ಮಹತ್ತರ ನಿರ್ಧಾರವನ್ನು ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಜಿತ್ ಕುಮಾರ್ ಶೆಟ್ಟಿ ವಡ್ಡರ್ಸೆ ಸ್ವಾಗತಿಸಿದ್ದಾರೆ.


ಈ ಕುರಿತು ಅಜಿತ್ ಕುಮಾರ್ ಶೆಟ್ಟಿ ಅವರು ರಾಜ್ಯ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ರನ್ನು ವಿಧಾನಸೌಧದಲ್ಲಿ ಭೇಟಿಯಾಗಿ ಯುವ ಕಾಂಗ್ರೆಸ್ ಪರವಾಗಿ ಧನ್ಯವಾದ ಸಲ್ಲಿಸಿದರು. ಪ್ರಕರಣದ ಬಗೆಗೆ ಕಠಿಣ ಕ್ರಮ ಕೈಗೊಂಡು, ನಷ್ಟದ ಹಣವನ್ನು ವಸೂಲು ಮಾಡುವ ಹಾಗೂ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆ ಆರಂಭಿಸಿರುವ ಸರ್ಕಾರವನ್ನೂ ಅವರು ಅಭಿನಂದಿಸಿದ್ದಾರೆ.