ಕುಂದಾಪುರ: ಚಲಿಸುತ್ತಿದ್ದ ಬಸ್ಸಿನಡಿಗೆ ಬಿದ್ದು ಮೊಪೆಡ್ ಹಿಂಬದಿ ಸವಾರೆ ಸಾವು


ಕುಂದಾಪುರ: ಏಕ ಮುಖ ಸಂಚಾರ ಮಾಡುತ್ತಿದ್ದ ಸಂದರ್ಭ ಮೊಪಡ್ ನಲ್ಲಿ ಸಂಚರಿಸುತ್ತಿದ್ದ ಹಿಂಬದಿ ಸವಾರೆ ರಸ್ತೆಗೆ ಬಿದ್ದಿದ್ದು, ಖಾಸಗಿ ಬಸ್ ಹತ್ತಿದ ಪರಿಣಾಮ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಭಾನುವಾರ ಮದ್ಯಾಹ್ನ ಕುಂದಾಪುರ ಸಂತೆ ಮಾರ್ಕೆಟ್ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಭಟ್ರಹಾಡಿ ಕ್ರಾಸ್ ಸಮೀಪ ನಡೆದಿದೆ.

ಕುಂದಾಪುರ ತಾಲೂಕಿನ ಕೊರ್ಗಿ ಎಂಬಲ್ಲಿನ ನಿವಾಸಿ ಮಂಜ ಎಂಬುವರ ಪತ್ನಿ ಜಲಜಾ (64) ಎಂಬುವರೇ ಅಪಘಾತದಲ್ಲಿ ಸಾವನ್ನಪ್ಪಿದವರು.

ಕೊರ್ಗಿ ನಿವಾಸಿ ಮಂಜ ಅವರು ತಮ್ಮ ಪತ್ನಿ ಜಲಜಾ ಅವರನ್ನು ಹಿಂಬದಿಯಲ್ಲಿ ಕುಳ್ಳಿರಿಸಿಕೊಂಡು ತಮ್ಮ ಅಳಿಯನ ಮನೆಯಾದ ಆನಗಳ್ಳಿಯಿಂದ ಮಧ್ಯಾಹ್ನ 12.30 ರ ವೇಳೆಗೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕೊರ್ಗಿಗೆ ಬರುತ್ತಿದ್ದರು. ಸಂತೆ ಮಾರ್ಕೆಟ್ ಸಮೀಪ ಭಟ್ರಹಾಡಿ ಎಂಬಲ್ಲಿ ಭಟ್ಕಳದಿಂದ ಕುಂದಾಪುರ ಕಡೆಗೆ ಪ್ರಸನ್ನ ಎಂಬುವವರು ಚಲಾಯಿಸುತ್ತಿದ್ದ ಮಹಾವೀರ ಹೆಸರಿನ ಖಾಸಗೀ ಬಸ್ ಓವರ್ ಟೇಕ್ ಮಾಡುವಾಗ ನಿಯಂತ್ರಣ ತಪ್ಪಿ ಮೊಪೆಡ್ ಹಿಂಬದಿ ಕುಳಿತಿದ್ದ ಜಲಜಾ ಅವರು ರಸ್ತೆಗೆ ಬಿದ್ದಿದ್ದು ಅವರ ಕುತ್ತಿಗೆಯ ಮೇಲೆ ಬಸ್ಸಿನ ಹಿಂಬದಿ ಚಕ್ರ ಹತ್ತಿ ಹೋಗಿದೆ. ಅಪಘಾತದಲ್ಲಿ ಜಲಜಾ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.


ಅಪಘಾತಕ್ಕೆ ಕಾರಣವಾದ ಬಸ್ ಶನಿವಾರ ರಾತ್ರಿ ಭಟ್ಕಳ ಪೆಟ್ರೋಲ್ ಬಂಕ್ ಒಂದರಲ್ಲಿ ನಿಲ್ಲಿಸಿದ್ದು, ಭಾನುವಾರ ಬೆಳಿಗ್ಗೆ ತನ್ನಷ್ಟಕ್ಕೆ ಸ್ಟಾರ್ಟ್ ಆಗಿ ಮುಂದಕ್ಕೆ ಚಲಿಸಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿತ್ತು. ಪರಿಣಾಮ ಬಸ್ಸಿನ ಮುಂಭಾಗ ಜಖಂಗೊಂಡಿದ್ದು, ಮುಂಭಾಗದ ಗಾಜು ಪುಡಿಯಾಗಿತ್ತು. ಜಖಂಗೊಂಡ ಬಸ್ಸನ್ನು ಉಡುಪಿಗೆ ರಿಪೇರಿಗೆಂದು ಕೊಂಡೊಯ್ಯುತ್ತಿದ್ದಾಗ ಕುಂದಾಪುರದಲ್ಲಿ ಮತ್ತೊಂದು ಅಪಘಾತ ಸಂಭವಿಸಿದೆ. ಕುಂದಾಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.