ಗಂಗೊಳ್ಳಿ: ದೋಣಿ ದುರಂತ ಸ್ಥಳಕ್ಕೆ ಉಭಯ ಸಂಸದರ ಭೇಟಿ – ಪರಿಹಾರಕ್ಕೆ ಸೂಚನೆ
ಕುಂದಾಪುರ: ಮಂಗಳವಾರ ಬೆಳಿಗ್ಗೆ ದೋಣಿ ದುರಂತದಲ್ಲಿ ಮೂವರು ಮೀನುಗಾರರು ನಾಪತ್ತೆಯಾದ ಘಟನೆಗೆ ಸಂಬಂಧಿಸಿ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಗಂಗೊಳ್ಳಿಗೆ ಭೇಟಿ ನೀಡಿ ಸಾಂತ್ವಾನ ಹೇಳಿದರು.

ಘಟನೆಯ ಕುರಿತು ಸ್ಥಳೀಯ ಮೀನುಗಾರರಿಂದ, ಪೊಲೀಸ್ ಹಾಗೂ ಮೀನುಗಾರಿಕೆ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದು ಜಿಲ್ಲಾಧಿಕಾರಿಗಳೊಂದಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಕಾಣೆಯಾಗಿರುವ ಮೀನುಗಾರರನ್ನು ಅತಿ ಶೀಘ್ರವೇ ಹುಡುಕಲು ಸೂಕ್ತ ನಿರ್ದೇಶನ ನೀಡುವಂತೆ ಹಾಗೂ ಸರ್ಕಾರದಿಂದ ಮೀನುಗಾರರ ಕುಟುಂಬಕ್ಕೆ ಅಗತ್ಯ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.

ಹವಾಮಾನ ಇಲಾಖೆಯು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಮಳೆಯಾಗುವ ಮುನ್ಸೂಚನೆ ನೀಡಿದ್ದು ಯಾವ ಮೀನುಗಾರರು ಜೀವ ಪಣಕ್ಕಿಟ್ಟು ಸಮುದ್ರಕ್ಕೆ ಇಳಿಯದಂತೆ ಮನವಿ ಮಾಡಿದ ಅವರು, ಕಾಣೆಯಾಗಿರುವ ಮೀನುಗಾರರ ಕುಟುಂಬಗಳೊಂದಿಗೆ ನಾನು ಸದಾ ಜೊತೆಗಿರುತ್ತೇನೆ ಎಂದು ಭರವಸೆ ನೀಡಿದರು.

ಈ ಸಂದರ್ಭ ಉಡುಪಿ – ಚಿಕ್ಕಮಂಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕುಂದಾಪುರ ಶಾಸಕ ಕಿರಣ್ ಕೊಡ್ಗಿ ಅವರು, ಜಿಲ್ಲಾಧ್ಯಕ್ಷ ನವೀನ್‌ಶೆಟ್ಟಿಕುತ್ಯಾರು, ಬೈಂದೂರು ಮಂಡಲ ಅಧ್ಯಕ್ಷೆ ಅನಿತಾ ಮೊದಲಾದವರು ಉಪಸ್ಥಿತರಿದ್ದರು.