ಗಂಗೊಳ್ಳಿ: ಬಿರುಗಾಳಿಗೆ ಮಗುಚಿದ ದೋಣಿ – ಮೂವರು ನಾಪತ್ತೆ! ಒಬ್ಬ ಪಾರು



ನಾಪತ್ತೆಯಾದ ಸುರೇಶ್ ಖಾರ್ವಿ, ರೋಹಿತ್ ಖಾರ್ವಿ ಹಾಗೂ ಜಗನ್ನಾಥ್ ಖಾರ್ವಿ
ಕುಂದಾಪುರ: ವಾಯುಭಾರ ಕುಸಿತಕ್ಕೊಳಗಾಗಿ ಗಂಟೆಗೆ 60 ಕಿ.ಮೀಗಿಂತಲೂ ಹೆಚ್ಚಿನ ವೇಗದ ಗಾಳಿ ಬೀಸಿದ್ದ ಪರಿಣಾಮ ಮೀನುಗಾರಿಕೆಗೆ ತೆರಳಿ ವಾಪಾಸ್ಸು ಬರುತ್ತಿದ್ದ ನಾಡದೋಣಿಯೊಂದು ಮಗುಚಿ ಮೂವರು ನಾಪತ್ತೆಯಾಗಿ, ಮತ್ತೊಬ್ಬ ಈಜಿ ಇನ್ನೊಂದು ದೋಣಿ ಹತ್ತಿ ಪಾರಾದ ಘಟನೆ ಮಂಗಳವಾರ ಬೆಳಿಗ್ಗೆ 9.30ರ ಸುಮಾರಿಗೆ ಕೋಡಿ ಸೀವಾಕ್ ಮತ್ತು ಗಂಗೊಳ್ಳಿ ಸೀವಾಕ್ ಮಧ್ಯೆ ಸೀ ಮೌತ್ (ಅಳಿವೆ ಬಾಗಿಲು) ನಲ್ಲಿ ನಡೆದಿದೆ. ದುರ್ಘಟನೆಯಲ್ಲಿ ನಾಪತ್ತೆಯಾದ ಮೀನುಗಾರರನ್ನು ಗಂಗೊಳ್ಳಿಯ ವಿನಾಯಕ ಸಾ ಮಿಲ್ ಸಮೀಪದ ಸಿಪಾಯಿ ಮನೆ ನಿವಾಸಿ ಸುರೆಶ್ ಖಾರ್ವಿ(48), ಗಂಗೊಳ್ಳಿಯ ಮಲ್ಯರಬೆಟ್ಟು ಚರ್ಚ್ ರಸ್ತೆ ಸೀನ ಎಂಬುವರ ಪುತ್ರ ಜಗದೀಶ್ ಖಾರ್ವಿ(50), ಗಂಗೊಳ್ಳಿಯ ಬೇಲಿಕೇರಿ ನಿವಾಸಿ ನಾರಾಯಣ ಎಂಬುವರ ಪುತ್ರ ಲೋಹಿತ್ ಖಾರ್ವಿ(34) ಎಂದು ಗುರುತಿಸಲಾಗಿದೆ. ಗಂಗೊಳ್ಳಿಯ ಮಲ್ಯರಬೆಟ್ಟು ನಿವಾಸಿ ಸಂತೋಷ್ ಖಾರ್ವಿ(35) ಪಾರಾದವರು.

ಗಂಗೊಳ್ಳಿಯಿಂದ ಮಂಗಳವಾರ ಬೆಳಿಗ್ಗೆ 7 ಗಂಟೆ ಸುಮಾರಿಗೆ ಒಂದು ದೋಣಿಯಲ್ಲಿ ನಾಲ್ಕು ಜನ ಮೀನುಗಾರಿಕೆಗೆ ತೆರಳಿದ್ದರು. ಸಮುದ್ದರದಲ್ಲಿ ಗಂಟೆಗೆ 60 ಕಿ.ಮೀ ವೇಗದ ಗಾಳಿ ಬೀಸಲಿದೆ ಎಂದು ಕಾರವಾರ ಬಂದರಿನಲ್ಲಿ ನಿನ್ನೆಯೇ ಎಚ್ಚರಿಸಲಾಗಿತ್ತು. ಆದರೆ ಗಂಗೊಳ್ಳಿ ಮೀನುಗಾರರಿಗೆ ಈ ಬಗ್ಗೆ ಅರಿವಿರಲಿಲ್ಲ ಎನ್ನಲಾಗಿದೆ. ಸುಮಾರು 8ರಿಂದ 10 ದೋಣಿಗಳಲ್ಲಿ ಮೀನುಗಾರರು ತೆರಳಿದ್ದರು. ಆದರೆ ಸಮುದ್ರದಲ್ಲಿ ಮೀನುಗಾರಿಕೆ ಸಾಧ್ಯವಾಗದೇ ಇದ್ದುದರಿಂದ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದವರು ವಾಪಾಸ್ಸಾಗುತ್ತಿದ್ದರು.


ಮೀನುಗಾರರು ವಾಪಾಸ್ಸು ಬರುತ್ತಿದ್ದ ವೇಳೆ ಬೆಳಿಗ್ಗೆ 9 ಗಂಟೆಗೆ ಕೋಡಿ ಸೀವಾಕ್ ಮತ್ತು ಗಂಗೊಳ್ಳಿ ಸೀವಾಕ್ ನಡುವೆ ಸೀಮೌತ್ (ಅಳಿವೆ ಬಾಗಿಲು) ನಲ್ಲಿ ಬರುತ್ತಿದ್ದ ವೇಳೆ ಭೀಕರ ಬಿರುಗಾಳಿಗೆ ದೋಣಿ ಮಗುಚಿದೆ. ದೋಣಿಯಲ್ಲಿದ್ದ ಮೀನುಗಾರರು ಸಮುದ್ರಕ್ಕೆ ಬಿದ್ದ ಬೆನ್ನಿಗೇ ಅವರ ಮೇಲೆ ದೋಣಿಯಲ್ಲಿದ್ದ ಬಲೆಯೂ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ಇದರಿಂದಾಗಿಯೇ ಮೀನುಗಾರರಿಗೆ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ ಎನ್ನಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ನಾಡದೋಣಿ ಅಧ್ಯಕ್ಷ ಯಶವಂತ ಖಾರ್ವಿ, ನಾಪತ್ತೆಯಾದವರು ಕುಟುಂಬಕ್ಕೆ ಸರ್ಕಾರ ತಕ್ಷಣ ಸ್ಪಂದಿಸಿ ಸಾಂತ್ವಾನದ ಜೊತೆಗೆ ಪರಿಹಾರ ನೀಡುವಂತೆ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ. ನಾಪತ್ತೆಯಾದವರ ಶೋಧ ಕಾರ್ಯ ಮುಂದುವರೆದಿದೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಜೀ ಶಾಸಕ ಗೋಪಾಲ ಪೂಜಾರಿ ಭೇಟಿ:


ಘಟನೆಯ ಸುದ್ಧಿ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬೈಂದೂರು ಮಾಜೀ ಶಾಸಕ ಕೆ. ಗೋಪಾಲ ಪೂಜಾರಿ ಸಂತ್ರಸ್ಥ ಕುಟುಂಬಗಳಿಗೆ ಸಾಂತ್ವಾನ ನೀಡಿದರು. ಬಳಿಕ ಮಾಧ್ಯಮದೊಮದಿಗೆ ಮಾತನಾಡಿದ ಅವರು, ಹವಾಮಾನ ವೈಪರೀತ್ಯಗಳ ಬಗ್ಗೆ ಮೀನುಗಾರರು ಎಚ್ಚರಿಕೆ ವಹಿಸಿಕೊಳ್ಳಬೇಕು. ದಯವಿಟ್ಟು ಹುಚ್ಚು ಧೈರ್ಯ ಮಾಡಬೇಡಿ, ನಿಮ್ಮ ಕುಟುಂಬಗಳು ನಿಮ್ಮನ್ನೇ ನಂಬಿ ಬದುಕು ಸವೆಸುತ್ತಿದ್ದಾರೆ. ಶುಕ್ರವಾರದೊಳಗೆ ಮಾನ್ಯ ಮಂತ್ರಿಗಳೊಮದಿಗೆ ಮಾತುಕತೆ ನಡೆಸಿ ಸಂತ್ರಸ್ಥ ಕುಟುಂಬಗಳಿಗೆ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದರು. ಅಲ್ಲದೇ ಹವಾಮಾನ ವೈಪರೀತ್ಯಗಳ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
