ಕುಂದಾಪುರ: ರಾಜ್ಯದ ಜನರಿಗೆ ಬಿಜೆಪಿ ಮಾಡಿದ ಅನ್ಯಾಯದ ಸತ್ಯ ದರ್ಶನ ಮಾಡಿದ ಕಾಂಗ್ರೆಸ್ – ನಾಲ್ಕು ಕಡೆ ಪ್ರತಿಭಟನಾ ಸಭೆ

ಕುಂದಾಪುರ: ಬಿಜೆಪಿ ಸರ್ಕಾರ ರಾಜ್ಯದಲ್ಲಿ ಆಡಳಿತದಲ್ಲಿದ್ದಾಗ 9 &11 ಏಕವಿನ್ಯಾಸ ನಕ್ಷೆಯನ್ನು ನಗರಾಭಿವೃದ್ಧಿ ಪ್ರಾಧಿಕಾರಗಳಲ್ಲಿ ಅನುಮೋದಿಸುವ ಆದೇಶ ಹೊರಡಿಸಿದ್ದಲ್ಲದೇ ಅದರಿಂದ ತೊಂದರೆಯಾದಾಗ ಈಗ ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರದ ಮೇಲೆ ಗೂಬೆ ಕೂರಿಸಿ ಪ್ರತಿಭಟನೆ ನಾಟಕವಾಡುತ್ತಿದೆ ಎಂದು ಮಲ್ಯಾಡಿ ಶಿವರಾಮ ಶೆಟ್ಟಿ ಆರೋಪಿಸಿದರು. ಅವರು ತೆಕ್ಕಟ್ಟೆ ಗ್ರಾಮ ಪಂಚಾಯತ್ ಎದುರುಗಡೆ ನಡೆದ ಕಾಂಗ್ರೆಸ್ ಸತ್ಯ ದರ್ಶನ ಪ್ರತಿಭಟನಾ ಸಪ್ತಾಹದಲ್ಲಿ ಭಾಗವಹಿಸಿ ಮಾತನಾಡಿದರು.

2021ರ ಜನವರಿಯಲ್ಲಿ ರಾಜ್ಯದಲ್ಲಿದ್ದ ಬಿಜೆಪಿ ಸರ್ಕಾರ ಕರ್ನಾಟಕ ಭೂಕಂದಾಯ ಅಧಿನಿಯಮ 1964ರ 94-B ಮತ್ತು 94-A(4) ಅಡಿ ಸ್ವೀಕೃತವಾದ ಅರ್ಜಿಗಳಲ್ಲಿ ಅನರ್ಹವಾಗಿರುವ ಅರ್ಜಿಗಳನ್ನು ತಿರಸ್ಕರಿಸಲು ಕಾನೂನು ತಿದ್ದುಪಡಿ ಮಾಡಿ ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಿತ್ತು ಅಲ್ಲದೇ ನಮೂನೆ 50,53,57ರ ಅಡಿಯಲ್ಲಿ ಸ್ವೀಕೃತ ಅರ್ಜಿಗಳನ್ನು ಸಮಯಬದ್ಧವಾಗಿ ವಿಲೇವಾರಿ ಮಾಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಅನರ್ಹ ಅರ್ಜಿಗಳನ್ನು ಕೂಡಲೇ ತಿರಸ್ಕರಿಸಬೇಕು ಎಂದು ಆದೇಶ ಮಾಡಿತ್ತು. ಇದರಿಂದ ಜನರಿಗಾದ ಅನ್ಯಾಯಕ್ಕೆ ಕಾಂಗ್ರೆಸ್ ಹೊಣೆ ಎನ್ನುವ ಬಿಜೆಪಿ ಆತ್ಮ ವಿಮರ್ಷೆ ಮಾಡಿಕೊಳ್ಳಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಅವರು ಕುಂದಾಪುರ ಪುರಸಭೆ ಎದುರು ನಡೆದ ಪ್ರತಿಭಟನೆಯಲ್ಲಿ ಆಗ್ರಹಿಸಿದರು.

ರಾಜ್ಯದಲ್ಲಿ ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಕೈಗೆಟಕುವ ದರದಲ್ಲಿ ಮನೆಗಳನ್ನು ಒದಗಿಸುವ ಉದ್ದೇಶದಿಂದ ಆಶ್ರಯ ಯೋಜನೆಯನ್ನು ಜಾರಿಗೆ ತಂದದ್ದು ಕಾಂಗ್ರೆಸ್ ಸರ್ಕಾರ. ಅದನ್ನು ಅರ್ಹ ಫಲಾನುಭವಿಗಳ ಬದಲು ಪಕ್ಷ ನಿಷ್ಠರಿಗೆ, ರಾಜಕೀಯ ಬೆಂಬಲಿಗರಿಗೆ ಹಂಚಿದ್ದು ಬಿಜೆಪಿ ಸರ್ಕಾರ. ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಬಿಜೆಪಿ ಮಾಡಿದ ತಪ್ಪನ್ನು ಕಾಂಗ್ರೆಸ್ ಸರ್ಕಾರದ ಮೇಲೆ ಹೊರಿಸುತ್ತಿದೆ ಎಂದು ದಿನೇಶ್ ಹೆಗ್ಡೆ ಮೊಳಹಳ್ಳಿ ಆರೋಪಿಸಿದ್ದಾರೆ.

ಸಾಮಾಜಿಕ ಭದ್ರತಾ ಯೋಜನೆಯಡಿ ಅನರ್ಹ ಪಿಂಚಿಣಿದಾರರಿಗೆ ಪಿಂಚಿಣಿ ಪಾವತಿ ಆಗಿದೆ ಎಂದಿದ್ದ ಬಿಜೆಪಿ ಅದನ್ನು ಇದೇ ಬಿಜೆಪಿ ಸರ್ಕಾರ ವಾಪಾಸ್ಸು ಪಡೆಯಲು ತೀರ್ಮಾನ ಕೈಗೊಂಡಿತ್ತು. ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ಯೋಜನೆಯಿಂದ ಹೊರಗಿಟ್ಟ ಬಿಜೆಪಿ ಕಾಂಗ್ರೆಸ್ ವಿರುದ್ಧ ಪ್ರತಿಭಟಿಸುತ್ತಿರುವುದು ಹಾಸ್ಯಾಸ್ಪದ ಎಂದು ಆನಗಳ್ಳಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ವಿಕಾಸ್ ಹೆಗ್ಡೆ ದೂರಿದರು.

ಬಿಜೆಪಿ ಸರ್ಕಾರ ತನ್ನ ಅಧಿಕಾರದ ಕೊನೆಯಲ್ಲಿ ವಿದ್ಯುತ್ ದರ ಏರಿಕೆ ಮಾಡಿದೆ. ಮೆಸ್ಕಾಂ ಇಲಾಖೆ ಅದನ್ನು ಅನುಷ್ಟಾನ ಮಾಡಿದೆ. ಆದರೆ ಅದನ್ನು ಕಾಂಗ್ರೆಸ್ ಮಾಡಿದೆ ಎಂದು ಬಿಜೆಪಿ ಸುಳ್ಳು ಹೇಳುತ್ತಿದೆ. ಹದಿನೈದನೇ ಹಣಕಾಸು ಆಯೋಗದ ಅನುದಾನದಲ್ಲಿ ಕೇಂದ್ರ ಸರ್ಕಾರದಿಂದ ಗ್ರಾಮ ಪಂಚಾಯತ್‌ಗಳಿಗೆ ಬರುವ ಶೇ.30ರ ಅನುದಾನವನ್ನು ಕೋವಿಡ್ ಕಾಲದಲ್ಲಿ ಆಪತ್ಕಾಲಕ್ಕೆಂದು ಕಡಿತ ಮಾಡಲಾಗಿತ್ತು. ಆದರೆ ಇಂದಿಗೂ ಈ ಕಡಿತವಾದ ಅನುದಾನ ನೀಡಿಕೆಯನ್ನು ಕೇಂದ್ರ ಸರ್ಕಾರ ಪುನರಾರಂಭಿಸಿಲ್ಲ. ಇದಕ್ಕೆ ಕಾಂಗ್ರೆಸ್ ಹೊಣೆಯೇ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು. ನೂರಾರು ಕಾರ್ಯಕರ್ತರು ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿದ್ದರು.
