ನಿಯಂತ್ರಣ ತಪ್ಪಿದ ಬೈಕ್ ಪಲ್ಟಿ: ಮೂವರಿಗೆ ಗಾಯ
ಕುಂದಾಪುರ: ಸಂಬಂಧಿಕರ ಮನೆಯಲ್ಲಿದ್ದ ದೈವದ ಕಾರ್ಯಕ್ರಮ ಮುಗಿಸಿಕೊಂಡು ಬರುತ್ತಿದ್ದ ವೇಳೆ ಬೈಕ್ ಪಲ್ಟಿಯಾದ ಪರಿಣಾಮ ಬೈಕಿನಲ್ಲಿದ್ದ ಮೂವರು ಗಾಯಗೊಂಡು ಆಸ್ಪತ್ರೆ ಸೇರಿದ ಘಟನೆ ಭಾನುವಾರ ರಾತ್ರಿ ಅಮಾಸೆಬೈಲು ಪೊಲೀಸ್ ಠಾಣಾ ವ್ಯಾಪ್ತಿಯ ಜಡ್ಡಿನಗದ್ದೆ ಎಂಬಲ್ಲಿ ನಡೆದಿದೆ. ಅಪಘಾತದಲ್ಲಿ ಗಾಯಗೊಂಡವರನ್ನು ಬೈಕ್ ಸವಾರ ದಿವಾಕರ ಹಾಗೂ ಆತನ ಅತ್ತೆ ಮಕ್ಕಳಾದ ಅಶ್ವಿನಿ ಹಾಗೂ ಶ್ರೇಯಾ ಎಂದು ತಿಳಿಯಲಾಗಿದೆ.

ಅಮಾಸೆಬೈಲು ಗ್ರಾಮದ ಮೂಡುಬೈಲು ರಮೇಶ್ ಎಂಬುವರ ಮನೆಯಲ್ಲಿ ಭಾನುವಾರ ರಾತ್ರಿ ದೈವದ ಕಾರ್ಯಕ್ರಮವಿತ್ತು ಮೂವರೂ ಕಾರ್ಯಕ್ರಮ ಮುಗಿಸಿ ಒಂದೇ ಬೈಕಿನಲ್ಲಿ ಮನೆಗೆ ಬರುತ್ತಿದ್ದರು. ಅಮಾಸೆಬೈಲು-ಜಡ್ಡಿನಗದ್ದೆ ರಸ್ತೆಯಲ್ಲಿ ಬರುತ್ತಿರುವಾಗ ಬೈಕ್ ಪಲ್ಟಿಯಾಗಿದೆ. ಮೂವರಿಗೂ ಗಾಯಗಳಾಗಿದ್ದು, ಅಶ್ವಿನಿ ಹಾಗೂ ದಿವಾಕರ್ ನನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಶ್ರೇಯಾ ಕುಂದಾಪುರದ ಖಾಸದಗೀ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಮಾಸೆಬೈಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.