ಕೊಲ್ಲೂರು ಅಭಿವೃದ್ಧಿಗೆ ಪ್ರಾಧೀಕಾರ ರಚನೆಗೆ ಚಿಂತನೆ : ಸಚಿವ ರಾಮಲಿಂಗಾ ರೆಡ್ಡಿ
ಕುಂದಾಪುರ: ರಾಜ್ಯದ ಪ್ರಸಿದ್ಧ ದೇವಸ್ಥಾನಗಳಾದ ಮಲೆ ಮಹದೇಶ್ವರ ಬೆಟ್ಟ, ಮೈಸೂರಿನ ಚಾಮುಂಡೇಶ್ವರಿ, ರೇಣುಕಾ ಎಲ್ಲಮ್ಮ, ಹುಲಿಯಮ್ಮ ದೇವಸ್ಥಾನ, ಘಾಟಿ ಸುಬ್ರಮಣ್ಯ ಕ್ಷೇತ್ರಗಳ ಅಭಿವೃದ್ಧಿಗಾಗಿ ಪ್ರಾಧಿಕಾರ ರಚನೆ ಮಾಡಲಾಗಿದೆ. ಕೊಲ್ಲೂರು ಹಾಗೂ ಕುಕ್ಕೆ ಸುಬ್ರಮಣ್ಯ ಕ್ಷೇತ್ರಗಳ ಸಮಗ್ರ ಅಭಿವೃದ್ಧಿಗಾಗಿ ಪ್ರಾಧಿಕಾರ ರಚನೆ ಮಾಡುವ ಕುರಿತು ಪರಿಶೀಲಿಸಲಾಗುತ್ತಿದೆ. ಈ ಬಗ್ಗೆ ಮುಂದಿನ ತಿಂಗಳು ವ್ಯವಸ್ಥಾಪನಾ ಸಮಿತಿ, ಶಾಸಕರು, ಮಾಜಿ ಶಾಸಕರು, ಅಧಿಕಾರಿಗಳು ಹಾಗೂ ಪ್ರಮುಖರ ಸಭೆಯನ್ನು ಬೆಂಗಳೂರಿನಲ್ಲಿ ಕರೆಯಲಾಗಿದೆ ಎಂದು ಮುಜರಾಯಿ ಹಾಗೂ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಮಂಗಳವಾರ ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದ ಬಳಿಕ ಮಾತನಾಡಿದರು. ಕೊಲ್ಲೂರು ದೇವಳಕ್ಕೆ ಸಂಬಂಧಿಸಿದ ಜಾಗ ಒತ್ತುವರಿ ತೆರವು ಸಂಬಂಧ ಸರ್ಕಾರ ಕ್ರಮಕೈಗೊಳ್ಳಲಿದೆ. ಅದಕ್ಕಾಗಿ ಸರ್ಕಾರದ ಹೆಚ್ಚುವರಿ ಅಡ್ವಕೇಟ್ ಜನರಲ್ ಅವರೊಂದಿಗೆ ಮಾತುಕತೆ ನಡೆಸಲಾಗುವುದು. ಒಳಚರಂಡಿ ಹಾಗೂ ಪಾರ್ಕಿಂಗ್ ವ್ಯವಸ್ಥೆಗೆ ಶಾಶ್ವತ ಯೋಜನೆ ರೂಪಿಸಬೇಕಾಗಿದೆ ಎಂದರು.
ಕ್ಷೇತ್ರದ ಒಳ ವ್ಯಾಪ್ತಿಯಲ್ಲಿ ಖಾಸಗಿ ಪಾರ್ಕಿಂಗ್ ವ್ಯವಸ್ಥೆಗೆ ನಿರ್ಬಂಧ ಹಾಕಬೇಕು. ದೇಗುಲದ ಒತ್ತುವರಿ ಭೂಮಿಗಳನ್ನು ತೆರವುಗೊಳಿಸಬೇಕು. ಬಡ ಮಕ್ಕಳಿಗೆ ವೈದ್ಯಕೀಯ ಶಿಕ್ಷಣ ದೊರಕಲು ದೇವಸ್ಥಾನದ ವತಿಯಿಂದ ವೈದ್ಯಕೀಯ ಕಾಲೇಜು ಆರಂಭಿಸಬೇಕು ಎಂದು ಮಾಜೀ ಶಾಸಕ ಕೆ. ಗೋಪಾಲ ಪೂಜಾರಿ ಸಚಿವರ ಗಮನ ಸೆಳೆದರು. ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರು, ಪಾರ್ಕಿಂಗ್ ಅವ್ಯವಸ್ಥೆ ಗಮನಕ್ಕೆ ತಂದರು. ಅಲ್ಲದೇ ಕೊಲ್ಲೂರಿನಲ್ಲಿ ಸುಸಜ್ಜಿತ ಸಾಂಸ್ಕೃತಿಕ ಭವನ ನಿರ್ಮಾಣದ ಬೇಡಿಕೆ ಇಟ್ಟರು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ.ಬಾಬು ಶೆಟ್ಟಿ ತಗ್ಗರ್ಸೆ ಮಾತನಾಡಿ, ದೇವಸ್ಥಾನದ ವತಿಯಿಂದ ನಡೆಯುವ ಐದು ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ಅವಕಾಶ ನೀಡಬೇಕು. ಪಾರ್ಕಿಂಗ್ ವ್ಯವಸ್ಥೆಗಾಗಿ ಶುಕ್ಲತೀರ್ಥ ಬಳಿಯಲ್ಲಿ ಗುರುತಿಸಲಾದ 3.50 ಎಕ್ರೆ ಕಂದಾಯ ಭೂಮಿಯನ್ನು ದೇವಸ್ಥಾನಕ್ಕೆ ನೀಡುವ ಕುರಿತು ಕಂದಾಯ ಇಲಾಖೆ ಶೀಘ್ರ ತೀರ್ಮಾನ ಕೈಗೊಳ್ಳಬೇಕು. ಸ್ವಚ್ಚತೆ ಹಾಗೂ ಇತರ ಮೂಲಭೂತ ಕಾರ್ಯಗಳ ಅನುಕೂಲಕ್ಕಾಗಿ ಹೊರ ಗುತ್ತಿಗೆ ನೌಕರರ ನೇಮಕಾತಿಗೆ ಅನುಮತಿ ನೀಡಬೇಕು. ಆನೆ ಬಾಗಿಲಿನಲ್ಲಿ ಶಿಲಾಮಯ ಸ್ವಾಗತ ಕಮಾನು ನಿರ್ಮಾಣ ಯೋಜನೆ ಇದೆ. 2 ಕೋಟಿ ರೂ. ವೆಚ್ಚದಲ್ಲಿ ಲಲಿತಾಂಬಿಕಾ ವಸತಿಗೃಹದ ನವೀಕರಣ, ವಿದ್ಯಾರ್ಥಿಗಳ ಹಾಸ್ಟೆಲ್ ಅಭಿವೃದ್ಧಿ ಹಾಗೂ ಸ್ವರ್ಣಮುಖಿ ಮಂಟಪದ ನವೀಕರಣ ಗುರಿಗಳನ್ನು ಇರಿಸಿಕೊಳ್ಳಲಾಗಿದೆ ಎಂದರು.
ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಘುರಾಮ ದೇವಾಡಿಗ ಆಲೂರು, ಮಹಾಲಿಂಗ ನಾಯ್ಕ್, ಕೆ.ಸುಧಾ ಬೈಂದೂರು, ಮಾಜಿ ಸಚಿವ ಅಭಯಚಂದ್ರ ಜೈನ್, ಮಂಗಳೂರು ಮಹಾನಗರಪಾಲಿಕೆ ಮಾಜಿ ಮೇಯರ್ ಭಾಸ್ಕರ್ ಮೊಯಿಲಿ, ರಾಜ್ಯ ಧಾರ್ಮಿಕ ಪರಿಷತ್ ಮಲ್ಲಿಕಾ ಪಕ್ಕಳಾ ಬಂಟ್ವಾಳ, ಉದ್ಯಮಿ ಶಂಕರ ಶೆಟ್ಟಿ ಬೆಂಗಳೂರು, ದಿನೇಶ್ ಹೆಗ್ಡೆ ಮೊಳಹಳ್ಳಿ, ಮುನಿಯಾಲು ಉದಯಕುಮಾರ ಶೆಟ್ಟಿ, ಪ್ರಸಾದ್‌ರಾಜ್ ಕಾಂಚನ್, ರಾಜು ಎಸ್ ಪೂಜಾರಿ ಬೈಂದೂರು, ಎಸ್.ಪ್ರಕಾಶ್ಚಂದ್ರ ಶೆಟ್ಟಿ, ಪ್ರದೀಪ್‌ಕುಮಾರ ಶೆಟ್ಟಿ ಗುಡಿಬೆಟ್ಟು, ಅರವಿಂದ್ ಪೂಜಾರಿ, ಕಿರಣ್ ಹೆಗ್ಡೆ ಅಂಪಾರು, ಮೋಹನ್ ಪೂಜಾರಿ ಉಪ್ಪುಂದ, ಅಣ್ಣಪ್ಪ ಶೆಟ್ಟಿ ಕಾಲ್ತೋಡು, ಜಗದೀಶ್ ದೇವಾಡಿಗ ಮೊದಲಾದವರು ಇದ್ದರು.
