ಸ್ವಂತ ಅಪ್ಪನ ಕೊಲೆಗೇ ಭೂಗತ ದೊರೆಗಳಿಗೆ ಸುಪಾರಿ!? – ಚೈತ್ರ ಕುಂದಾಪುರ ವಿರುದ್ಧ ತಂದೆಯಿಂದಲೇ ಪೊಲೀಸ್ ದೂರು

ಕುಂದಾಪುರ: ಗೋವಿಂದ ಬಾಬು ಪೂಜಾರಿಗೆ ವಂಚನೆ ಮಾಡಿದ ಪ್ರಕರಣದ ಮೂಲಕ ಸುದ್ಧಿಯಾಗಿದ್ದ ಹಿಂದೂ ಫೈರ್ ಬ್ರ್ಯಾಂಡ್ ಸ್ಪೀಕರ್ ಎನ್ನಿಸಿಕೊಂಡಿದ್ದ ಚೈತ್ರಾ ಕುಂದಾಪುರ ಇದೀಗ ತನ್ನ 70 ವರ್ಷ ಪ್ರಾಯದ ತಂದೆಯನ್ನು ಕೊಲ್ಲಿಸಲು ಭೂಗತ ದೊರೆಗಳಿಗೆ ಸುಪಾರಿ ನೀಡುವುದಾಗಿ ಬೆದರಿಸಿದ್ದಾಳೆ ಎನ್ನುವ ಬಗ್ಗೆ ತಂದೆಯೇ ದೂರು ನೀಡಿದ್ದಾರೆ. ಚೈತ್ರಾಳ ತಂದೆ ಬಾಲಕೃಷ್ಣ ನಾಯಕ್ ಲಿಖಿತವಾಗಿ ನೀಡಿರುವ ದೂರಿನಲ್ಲಿ ಮಗಳು ಚೈತ್ರಾ ಹಾಗೂ ಪತ್ನಿ ರೋಹಿಣಿ ಇಬ್ಬರು ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ್ದು, ಐದು ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದಲ್ಲದೇ ಭೂಗತ ದೊರೆಗಳಿಗೆ ಸುಫಾರಿ ನೀಡಿ ಕೊಲೆ ಮಾಡಿಸುವುದಾಗಿ ಬೆದರಿಕೆ ಹಾಕಿರುವುದಾಗಿ ಆರೋಪಿಸಿದ್ದು, ಇಬ್ಬರ ವಿರುದ್ಧವೂ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಮೇ 15ರಂದು ದೂರು ನೀಡಲಾಗಿದೆ.

ದೂರಿನ ಸಾರಾಂಶ: ನಾನು ಮೇಲಿನ ವಿಳಾಸದಲ್ಲಿ ನನ್ನ ಹೆಂಡತಿ ರೋಹಿಣಿ, ಮಕ್ಕಳಾದ ಚೈತ್ರ ಮತ್ತು ಮಾನ್ಯ ಇವರೊಂದಿಗೆ ವಾಸವಾಗಿದ್ದೆನು. ನನ್ನ ದೊಡ್ಡ ಮಗಳು ಗಾಯತ್ರಿ ಸುಮಾರು 15 ವರ್ಷಗಳ ಹಿಂದೆ ಮದುವೆಯಾಗಿ ಕೋಟೇಶ್ವರದ ಕುಂಬ್ರಿಯಲ್ಲಿ ಗಂಡನೊಂದಿಗೆ ವಾಸವಾಗಿದ್ದಳು. ಸುಮಾರು ಮೂರು ವರ್ಷಗಳಿಂದ ನಮ್ಮ ಮನೆಗೆ ನನ್ನ ಮಗಳು ಚೈತ್ರ ಇವಳ ಸ್ನೇಹಿತರಾದ ಶ್ರೀಕಾಂತ್ ಮತ್ತು ಇತರ ಐದರಿಂದ ಆರು ಜನರು ಆಗಾಗ್ಗೆ ಬಂದು ನಗದು ಹಣದ ವ್ಯವಹಾರ ಮಾಡುತ್ತಿದ್ದರು. ಒಂದು ದಿನ ರಾತ್ರಿ ಸಮಯ ನಮ್ಮ ಮನೆಯಲ್ಲಿ ಚೈತ್ರ ಮತ್ತು ಅವರುಗಳು ಕೋಟ್ಯಾಂತರ ರೂಪಾಯಿ ನಗದು ಹಣವನ್ನು ಲೆಕ್ಕ ಮಾಡುತ್ತಿದ್ದು ನಾನು ಅದನ್ನು ನೋಡಿ ಚೈತ್ರಳ ಬಳಿ ಇಷ್ಟೊಂದು ದೊಡ್ಡ ಮೊತ್ತದ ಹಣವನ್ನು ನಮ್ಮ ಮನೆಗೆ ತಂದು ಲೆಕ್ಕ ಮಾಡುವುದು ಸರಿಯಲ್ಲ ಯಾವುದಾದರೂ ಇಲಾಖೆಯವರಿಗೆ ಈ ವಿಷಯ ತಿಳಿದಲ್ಲಿ ನಮ್ಮ ಮೇಲೆ ಪ್ರಕರಣ ದಾಖಲಾಗಬಹುದೆಂದು ಹೇಳಿದೆನು. ಆಗ ನನ್ನ ಹೆಂಡತಿ ರೋಹಿಣಿ ಹಾಗೂ ಮಗಳು ಚೈತ್ರ ನನಗೆ ಸುಮ್ಮನಿರಿ ಎಂದು ದಬಾಯಿಸಿದರು. ನಂತರದ ದಿನಗಳಲ್ಲಿ ಅವರು ನನ್ನ ಬಳಿ ಮಾತನಾಡುವುದನ್ನು ನಿಲ್ಲಿಸಿದರು. ನನ್ನ ಮಗಳು ಚೈತ್ರ ಮಾಡುತ್ತಿದ್ದ ಅವ್ಯವಹಾರದಿಂದ ನನಗೆ ಸಮಸ್ಯೆ ಬರಬಹುದೆಂದು ಹೆದರಿ ಮಂಗಳೂರಿನ ಖಾಸಗಿ ಹೋಟೇಲನಲ್ಲಿ ಕೆಲಸಕ್ಕೆ ಸೇರಿ ಉದ್ಯೋಗ ಮಾಡಿಕೊಂಡು ಬಂದಿರುತ್ತೇನೆ. ತದನಂತರ ಆ ಸಮಯದಲ್ಲಿ ನಮ್ಮ ಮನೆಯಲ್ಲಿ ಕೋಟ್ಯಾಂತರ ರೂಪಾಯಿ ಹಣವನ್ನು ಲೆಕ್ಕ ಮಾಡುತ್ತಿದ್ದ ಹಣ ಗೋವಿಂದ ಬಾಬು ಪೂಜಾರಿ ಇವರಿಗೆ ಸೇರಿದ ಹಣವೆಂದು ಮಾದ್ಯಮದ ಮೂಲಕ ತಿಳಿಯಿತು. ಚೈತ್ರಳ ಮೇಲೆ ಗೋವಿಂದ ಬಾಬು ಪೂಜಾರಿ ಕೇಸ್ ದಾಖಲಿಸಿದ ವಿಷಯ ಸಹಾ ತಿಳಿಯಿತು. ನಾನು ನಿಜ ವಿಷಯವನ್ನು ಬೇರೆಯವರಿಗೆ ತಿಳಿಸುತ್ತೇನೆ ಎನ್ನುವ ಊಹನೆಯ ಮೇಲೆ ನನ್ನ ಹೆಂಡತಿ ರೋಹಿಣಿ ಹಾಗೂ ನನ್ನ ಮಗಳಾದ ಚೈತ್ರ ನನಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಲು ಪ್ರಾರಂಭಿಸಿದರು. ಆ ಕಾರಣ ನಾನು ಆ ಮನೆಯನ್ನು ಬಿಟ್ಟು ನನ್ನ ಹಿರಿಯ ಮಗಳಾದ ಗಾಯತ್ರಿ ಇವಳ ಮನೆಗೆ ಬಂದು ಹೋಗಲು ಪ್ರಾರಂಭಿಸಿದೆನು.

ಈಗ ಚೈತ್ರ ಹಾಗೂ ನನ್ನ ಹೆಂಡತಿ ರೋಹಿಣಿ ಇವರುಗಳು ನನ್ನ ಹಿರಿಯ ಮಗಳಾದ ಗಾಯತ್ರಿ ನನಗೆ ಆಶ್ರಯ ನೀಡಿರುತ್ತಾಳೆ ಎನ್ನುವ ಉದ್ದೇಶದಿಂದ ಆಕೆಗೂ ಸಹಾ ಅವರುಗಳು ಜೀವ ಬೆದರಿಕೆ ಹಾಕಿರುತ್ತಾರೆ. ನಂತರ ನನ್ನ ಮಗಳು ಆಕೆಯ ಸ್ನೇಹಿತನಾದ ಶ್ರೀಕಾಂತ್ ಈತನನ್ನು ಮದುವೆಯಾಗಲು ನಿರ್ಧರಿಸಿದ ವಿಷಯ ತಿಳಿಯಿತು. ಆಗ ನಾನು ಅವಳ ಬಳಿ ಆತನನ್ನು ಮದುವೆ ಆಗುವುದು ಸರಿಯಲ್ಲ ಆತನು ಸರಿಯಿಲ್ಲ ಎಂದು ಹೇಳಿದಾಗ ನನ್ನ ಮಗಳು ಚೈತ್ರ ಹಾಗೂ ನನ್ನ ಹೆಂಡತಿ ರೋಹಿಣಿ ಇವರುಗಳು ಸೇರಿ ನನ್ನ ಬಳಿ ಒಂದು ವೇಳೆ ಆತನನ್ನು ಬಿಟ್ಟು ಬೇರೆ ಹುಡುಗನನ್ನು ಮದುವೆಯಾಗುವುದಾದರೆ ನನಗೆ ರೂ.5,00,000/- (ಐದು ಲಕ್ಷ) ನಗದು ನೀಡಬೇಕೆಂದು ಒತ್ತಡ ಹೇರಿದರು ಹಾಗೂ ಆ ಮದುವೆಗೆ ಒಪ್ಪದೇ ಇದ್ದಲ್ಲಿ ನನ್ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾಳೆ. ಅದಕ್ಕೆ ನಾನು ಒಪ್ಪಲಿಲ್ಲ. ನಂತರ ಆಕೆಯ ಮದುವೆಯು ಶ್ರೀಕಾಂತ್ ನೊಂದಿಗೆ ನಿಶ್ಚಯವಾಗಿ ಮದುವೆಗೆ ನಾನು ಬಾರದೇ ಇದ್ದಲ್ಲಿ ನನ್ನನ್ನು ಹಾಗೂ ನನ್ನ ಹಿರಿಯ ಮಗಳು ಗಾಯತ್ರಿಯನ್ನು ಭೂಗತ ದೊರೆಗಳಿಗೆ ಸುಪಾರಿ ನೀಡಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾಳೆ. ಕುಂದಾಪುರದಲ್ಲಿರುವ ನನಗೆ ಸೇರಿದ ಆಸ್ತಿಯನ್ನು ಯಾವ ರೀತಿಯಲ್ಲಿ ತನ್ನ ಹೆಸರಿಗೆ ಮಾಡಿಕೊಳ್ಳಬೇಕೆಂದು ಗೊತ್ತಿದೆ. ಹಾಗೆಯೇ ತನ್ನ ಹೆಸರಿಗೆ ಸದ್ರಿ ಆಸ್ತಿಯನ್ನು ಮಾಡಿಕೊಂಡೇ ಕೊಳ್ಳುತ್ತೇನೆಂದು ಬೆದರಿಕೆ ಹಾಕಿರುತ್ತಾಳೆ. ಆಕೆಗೆ ಭೂಗತ ದೊರೆಗಳ ಸಂಪರ್ಕವಿದ್ದು, ಆಕೆ ಯಾವುದೇ ಹೇಯ ಕೃತ್ಯ ಮಾಡಲು ಹೇಸುವವಳಲ್ಲ. ಆಕೆಯು ಈಗಾಗಲೇ ನಾನು ಮೃತಪಟ್ಟಿರುತ್ತೇನೆಂದು ಸಾರ್ವಜನಿಕವಾಗಿ ಹೇಳುತ್ತಾ ಬಂದಿರುತ್ತಾಳೆ.

ಆದುದರಿಂದ ದಯಾಳುಗಳಾದ ತಾವು ಈ ಬಗ್ಗೆ ತಕ್ಷಣ ಸೂಕ್ತ ತನಿಖೆ ನಡೆಸಿ ನನಗೂ ಹಾಗೂ ನನ್ನ ಹಿರಿಯ ಮಗಳಾದ ಗಾಯತ್ರಿ ಇವಳಿಗೆ ಸೂಕ್ತ ರಕ್ಷಣೆ ನೀಡಬೇಕಾಗಿ ಪ್ರಾರ್ಥನೆ ಹಾಗೂ ನನ್ನ ಹೆಂಡತಿ ರೋಹಿಣಿ ಹಾಗೂ ನನ್ನ ಮಗಳು ಚೈತ್ರ ಇವಳ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗಿ ಪ್ರಾರ್ಥನೆ ಎಂಬುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಆದರೆ ಪೊಲೀಸರು ಮಾತ್ರ ಎಫೈಆರ್ ದಾಖಲಿಸದೇ ರಾಜೀ ಪಂಚಾಯಿತಿ ಸಂಧಾನ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
