*ಮಂಗಳೂರು: ಫಾಝಿಲ್ ಹತ್ಯೆ ಆರೋಪಿ, ರೌಡಿಶೀಟರ್ ಸುಹಾಸ್ ಶೆಟ್ಟಿ ಬರ್ಬರ ಹತ್ಯೆ : ಸೋಶಿಯಲ್ ಮೀಡಿಯಾದಲ್ಲಿ ವೈರಲ್ಲಾಯ್ತು ಕೊಲೆ ವಿಡಿಯೋ*
ಮಂಗಳೂರು: ಫಾಝಿಲ್ ಕೊಲೆ ಆರೋಪಿ ರೌಡಿ ಶೀಟರ್, ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ(32) ಎಂಬಾತನನ್ನು ನಾಲ್ವರ ತಂಡ ತಲವಾರಿನಲ್ಲಿ ಕೊಚ್ಚಿ ಕೊಲೆಗೈದ ಘಟನೆ ನಗರದ ಹೊರವಲಯದ ಬಜ್ಪೆ ಕಿನ್ನಿಪದವು ಎಂಬಲ್ಲಿ ಇಂದು (ಗುರುವಾರ) ರಾತ್ರಿ 8.30 ಸುಮಾರಿಗೆ ನಡೆದಿದೆ. ಎರಡು ವರ್ಷಗಳ ಹಿಂದೆ ನಡೆದಿದ್ದ ಸುರತ್ಕಲ್ ನಲ್ಲಿ ಫಾಜಿಲ್ ಎಂಬ ಯುವಕನ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿ, ಬಜರಂಗದಳದ ಗೋರಕ್ಷಾ ವಿಭಾಗದ ಸದಸ್ಯ ಸುಹಾಸ್ ಶೆಟ್ಟಿ ಕೊಲೆಯಾದವನು.

ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಗೆ ಪ್ರತೀಕಾರವಾಗಿ ಫಾಝಿಲ್ ಹತ್ಯೆ ಮಾಡಲಾಗಿತ್ತು. ಇದೀಗ ಫಾಝಿಲ್ ಹತ್ಯೆಗೆ ಪ್ರತೀಕಾರವಾಗಿ ಈ ಕೊಲೆ ನಡೆದಿದೆ ಎನ್ನಲಾಗುತ್ತಿದೆ. ಮಂಗಳೂರು ಹೊರವಲಯದ ಬಜಪೆ ಕಿನ್ನಿಪದವು ಎಂಬಲ್ಲಿ ತಲವಾರು ದಾಳಿ ನಡೆಸಿದ್ದು ದುಷ್ಕರ್ಮಿಗಳು ನಡು ರಸ್ತೆಯಲ್ಲೇ ಕೊಚ್ಚಿ ಕೊಚ್ಚಿ ಕೊಂದು ಹಾಕಿದ್ದಾರೆ. ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಜಾಲತಾಣದಲ್ಲಿ ವೈರಲ್ ಆಗಿದೆ.

ಹಲವು ಕೊಲೆ, ಕೊಲೆ ಯತ್ನ ಪ್ರಕರಣದಲ್ಲಿ ಆರೋಪಿಯಾಗಿದ್ದ ಸುಹಾಸ್ ಶೆಟ್ಟಿ ಮೃತದೇಹ ಎ.ಜೆ.ಆಸ್ಪತ್ರೆಯಲ್ಲಿದೆ. ಎ.ಜೆ.ಆಸ್ಪತ್ರೆ ಮುಂಭಾಗ ಭಾರೀ ಸಂಖ್ಯೆಯಲ್ಲಿ ಹಿಂದೂ ಕಾರ್ಯಕರ್ತರು ಜಮಾಯಿಸಿದ್ದಾರೆ. ಆಸ್ಪತ್ರೆಗೆ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಶಾಸಕ ಭರತ್ ಶೆಟ್ಟಿ ಮತ್ತು ಹಿಂದೂ ಸಂಘಟನೆ ನಾಯಕರ ಆಗಮಿಸುತ್ತಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಆಸ್ಪತ್ರೆ ಎದುರು ಬಿಗು ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.

ಬೆಳ್ಳಾರೆಯಲ್ಲಿ ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ್ ನೆಟ್ಟಾರು ಹತ್ಯೆಯಾದ ಎರಡು ದಿನಗಳ ನಂತರ ಅಂದರೆ 2020ರ ಆಗಸ್ಟ್ 1ರಂದು ಸುರತ್ಕಲ್‌ನಲ್ಲಿ 23 ವರ್ಷದ ಮುಸ್ಲಿಂ ಯುವಕ ಫಾಜಿಲ್‌ನನ್ನು ಕೊಚ್ಚಿ ಕೊಲ್ಲಲಾಯಿತು. ಆಗಸ್ಟ್ 2 ರಂದು ನಡೆದ ಕೊಲೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಸುಹಾಸ್ ಶೆಟ್ಟಿ ಸೇರಿದಂತೆ ಮೋಹನ್ (26), ಗಿರಿಧರ್ (23), ಅಭಿಷೇಕ್ (21), ಶ್ರೀನಿವಾಸ್ (23), ಮತ್ತು ದೀಕ್ಷಿತ್ (21) ಹಾಗೂ ಕಾರನ್ನು ಬಾಡಿಗೆಗೆ ನೀಡಿದ್ದಕ್ಕಾಗಿ ಮತ್ತೊಬ್ಬ ಆರೋಪಿ ಅಜಿತ್ ಕ್ರಾಸ್ತಾ ಸೇರಿ ಆರು ಜನರನ್ನು ಮಂಗಳೂರು ಪೊಲೀಸರು ಬಂಧಿಸಿದ್ದರು. ಈ ಸಂದರ್ಭ ವಿಎಚ್‌ಪಿಯ ಮಂಗಳೂರು ಕಾರ್ಯದರ್ಶಿ ಶರಣ್ ಪಂಪ್‌ವೆಲ್, “ಸುಹಾಸ್ ಶೆಟ್ಟಿ ವಿಎಚ್‌ಪಿ ಆಯೋಜಿಸಿದ ಕಾರ್ಯಕ್ರಮಗಳಿಗೆ ಬರುತ್ತಿದ್ದರು. ಆದರೆ ಹಲವಾರು ಹಿಂದೂ ಯುವಕರು ವಿಎಚ್‌ಪಿ ಮತ್ತು ಬಜರಂಗ ದಳ ಆಯೋಜಿಸಿದ ಕಾರ್ಯಕ್ರಮಗಳಿಗೆ ಬರುತ್ತಾರೆ. ಸುಹಾಸ್ ಆ ಸಂಘಟನೆಯ ಸದಸ್ಯರಾಗಿರಲಿಲ್ಲ ಎಂಡಿದ್ದರು. ಬಳಿಕ 2021 ರಲ್ಲಿ ಜಾಮೀನಿನಲ್ಲಿ ಬಿಡುಗಡೆಯಾಗಿದ್ದ.