ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ : ಪ್ರಥಮ ಉಡುಪಿ, ದ್ವಿತೀಯ ದಕ್ಷಿಣ ಕನ್ನಡ ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡ ಯಾದಗಿರಿ ಜಿಲ್ಲೆ


ಬೆಂಗಳೂರು: 2024-25ರ ಶೈಕ್ಷಣಿಕ ಸಾಲಿನ ಕರ್ನಾಟಕದ ದ್ವಿತೀಯ ಪಿಯು ಪರೀಕ್ಷೆಯ ಫಲಿತಾಂಶ ಮಂಗಳವಾರ ಪ್ರಕಟಗೊಂಡಿದೆ. ನಿರೀಕ್ಷೆಯಂತೆ ಪ್ರಥಮ ಸ್ಥಾನವನ್ನು ಉಡುಪಿ ಜಿಲ್ಲೆ (93.90%) ಬಾಚಿಕೊಂಡರೆ, ದ್ವಿತೀಯ ಸ್ಥಾನವನ್ನು ದಕ್ಷಿಣ ಕನ್ನಡ ಜಿಲ್ಲೆ (93.50%) ಪಡೆದುಕೊಂಡಿದೆ. ಯಾದಗಿರಿ ಜಿಲ್ಲೆ (48.45%) ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಆದರೆ ವಿಶೇಷವೆಂದರೆ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿನಿಯರು ಅತೀ ಹೆಚ್ಚು ಅಂಕ ಪಡೆದುಕೊಂಡು ರಾಜ್ಯಕ್ಕೆ ಮೊದಲ ಸ್ಥಾನಿಯಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಮಂಗಳೂರಿನ ಎಕ್ಸ್‌ಪರ್ಟ್ ಪಿಯು ಕಾಲೇಜಿನ ಅಮೂಲ್ಯ ಕಾಮತ್ (599/600) ಹಾಗೂ ವಾಣಿಜ್ಯ ವಿಭಾಗದಲ್ಲಿ ಮಂಗಳೂರಿನ ಕೆನರಾ ಪಿಯು ಕಾಲೇಜಿನ ದೀಪಶ್ರೀ 599/600 ಹಾಗೂ ಕಲಾ ವಿಭಾಗದಲ್ಲಿ ಬಳ್ಳಾರಿಯ ಸಂಜನಾ ಬಾಯಿ 597/600 ಮೊದಲಿಗರಾಗಿ ಹೊರಹೊಮ್ಮಿದ್ದಾರೆ.
ಈ ಸಾಲಿನಲ್ಲಿ ಪರೀಕ್ಷೆ ಬರೆದ 4,68,439 ವಿದ್ಯಾರ್ಥಿಗಳ ಪೈಕಿ 1,00,571 ವಿದ್ಯಾರ್ಥಿಗಳು 85% ಮತ್ತು ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದುಕೊಂಡಿದ್ದಾರೆ. 2,78,054 ವಿದ್ಯಾರ್ಥಿಗಳು ಶೇ. 60 ರಿಂದ 85 ಅಂಕಗಳು, 70,969 ವಿದ್ಯಾರ್ಥಿಗಳು 50 ರಿಂದ 60 ಪ್ರತಿಶತ ಅಂಕಗಳನ್ನು ಪಡೆದುಕೊಂಡರೆ 18,845 ವಿದ್ಯಾರ್ಥಿಗಳು ಶೇ. 50ಕ್ಕಿಂತ ಕಡಿಮೆ ಅಂಕಗಳನ್ನು ಪಡೆದುಕೊಂಡಿದ್ದಾರೆ.
ಇನ್ನು ಕನ್ನಡ ಮಾಧ್ಯಮದಲ್ಲಿ ಪರೀಕ್ಷೆಗೆ ಬರೆದ 2,08,794 ವಿದ್ಯಾರ್ಥಿಗಳ ಪೈಕಿ 1,17,703 ಉತ್ತೀರ್ಣರಾಗಿದ್ದು ಶೇ. 56.37 ಫಲಿತಾಂಶ ಬಂದರೆ, ಇಂಗ್ಲೀಷ್ ಮಾಧ್ಯಮದಲ್ಲಿ ಪರೀಕ್ಷೆ ಬರೆದ 4,29,011 ವಿದ್ಯಾರ್ಥಿಗಳ ಪೈಕಿ 3,50,736 ಉತ್ತೀರ್ಣರಾಗಿ 81.75% ಫಲಿತಾಂಶ ಬಂದಿದೆ. ಪರಿಶಿಷ್ಟ ಜಾತಿ (SC) ವಿಭಾಗದಲ್ಲಿ 1,10,963 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 69,269 ವಿದ್ಯಾರ್ಥಿಗಳು ಉತ್ತೀರ್ಣರಾಗಿ 62.43% ಫಲಿತಾಂಶ ಬಂದಿದೆ. ಪರಿಶಿಷ್ಟ ಪಂಗಡ (ST) ವಿಭಾಗದಲ್ಲಿ 41,951 ವಿದ್ಯಾರ್ಥಿಗಳು ಹಾಜರಾಗಿದ್ದರು, ಮತ್ತು 26,460 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡಾ 63.07% ಫಲಿತಾಂಶ ದೊರಕಿದೆ.
ಪ್ರವರ್ಗ-1 ವಿದ್ಯಾರ್ಥಿಗಳಲ್ಲಿ 45,300 ವಿದ್ಯಾರ್ಥಿಗಳು ಹಾಜರಾಗಿದ್ದರು, ಮತ್ತು 31,386 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡಾ 69.28%, ಪ್ರವರ್ಗ-2A ವಿಭಾಗದಲ್ಲಿ 1,39,204 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 1,05,115 ವಿದ್ಯಾರ್ಥಿಗಳು ಉತ್ತೀರ್ಣರಾಗಿ 75.51%, ಪ್ರವರ್ಗ 2B ನಲ್ಲಿ 73,597 ವಿದ್ಯಾರ್ಥಿಗಳು ಹಾಜರಾಗಿ 52,168 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ, ಶೇಕಡಾ 70.91, ಪ್ರವರ್ಗ 3A ದಲ್ಲಿ 62,026 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 52,168 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ. 84.11 ರಷ್ಟು ಫಲಿತಾಂಶ ಪಡೆದಿದ್ದಾರೆ. 3B ನಲ್ಲಿ 1,00,561 ವಿದ್ಯಾರ್ಥಿಗಳ ಪೈಕಿ 77,387 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 76.96, ಸಾಮಾನ್ಯ ವರ್ಗದಲ್ಲಿ ಪರೀಕ್ಷೆ ಬರೆದ 64,213 ವಿದ್ಯಾರ್ಥಿಗಳ ಪೈಕಿ 55,868 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ. 87.00 ರಷ್ಟು ಗರಿಷ್ಠ ಫಲಿತಾಂಶ ದಾಖಲಿಸಿದೆ.
ಸರ್ಕಾರಿ ಪಿಯು ಕಾಲೇಜುಗಳಲ್ಲಿ 1,44,425 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು, ಅದರಲ್ಲಿ 82,474 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು, ಇದರ ಪರಿಣಾಮವಾಗಿ ಶೇಕಡಾ 57.11% ಹಾಗೂ ಅನುದಾನಿತ ಪಿಯು ಕಾಲೇಜುಗಳಲ್ಲಿ 98,649 ವಿದ್ಯಾರ್ಥಿಗಳು ಪರೀಕ್ಷೆ ಬರೆದು 61,859 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡಾ 62.69% ಫಲಿತಾಂಶ ಬಂದಿದೆ. ಅನುದಾನರಹಿತ ಪಿಯು ಕಾಲೇಜುಗಳಲ್ಲಿ ಅತಿ ಹೆಚ್ಚು ಅಂದರೆ 3,29,458 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದು, 2,73,156 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡಾ 82.94% ಫಲಿತಾಂಶ ಸಾಧಿಸಿದೆ. ಬಿಬಿಎಂಪಿ ಪಿಯು ಕಾಲೇಜುಗಳ 2,217 ವಿದ್ಯಾರ್ಥಿಗಳ ಪೈಕಿ 1,527 (68.88%) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿಭಜಿತ ಪಿಯು ಕಾಲೇಜುಗಳಲ್ಲಿ 51,427 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಕೇವಲ 7,965 (15.49%.) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ, KREIS (ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ) ಕಾಲೇಜುಗಳಲ್ಲಿ 11,829 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 8,458 (71.48%) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ,
ವಿಜ್ಞಾನ ವಿಭಾಗದಲ್ಲಿ 2,80,933 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 2,31,461 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ, ಇದರಿಂದಾಗಿ ಶೇಕಡಾ 82.45% ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 2,03,429 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 1,55,425 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ, ಅಂದರೆ ಶೇಕಡಾ 76.07% ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ 1,53,043 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ 81,553 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ, ಇದರ ಪರಿಣಾಮವಾಗಿ ಶೇಕಡಾ 53.29% ಉತ್ತೀರ್ಣರಾಗಿದ್ದಾರೆ. ಒಟ್ಟು 6,37,405 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 4,68,439 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ, ಒಟ್ಟು ಫಲಿತಾಂಶ ಶೇಕಡಾ 73.45 ಫಲಿತಾಂಶ ಬಂದಿದೆ. ಒಟ್ಟಾರೆಯಾಗಿ, ರಾಜ್ಯದಲ್ಲಿ 6,37,805 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದು, 4,68,439 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡಾ 73.45 ಫಲಿತಾಂಶ ಬಂದಿದೆ.