ಉಡುಪಿ: ಡಿಸಿ v/s ಎಸಿ ನಡುವೆ ತಾರಕಕ್ಕೇರಿದ ಸಂಘರ್ಷ – ಎಸಿ ಮಹೇಶ್ಚಂದ್ರ ಸಸ್ಪೆಂಡ್!

ಕುಂದಾಪುರ: ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಹಾಗೂ ಕುಂದಾಪುರ ಉಪವಿಭಾಗಾಧಿಕಾರಿ ಮಹೇಶ್ಚಂದ್ರ ಅವರ ನಡುವಿನ ವೈಮನಸ್ಸು ತಾರಕಕ್ಕೇರಿದೆ. ಪರಿಣಾಮವಾಗಿ ಕುಂದಾಪುರ ಎಸಿ ಮಹೇಶ್ಚಂದ್ರ ಅವರ ಜೊತೆಗೆ ತಿರುಗಾಡುತ್ತಿದ್ದ ಗ್ರಾಮಕರಣಿಕ ಕಾಂತರಾಜು ಅವರನ್ನು ಕೆಲವು ದಿನಗಳ ಹಿಂದೆ ಸಸ್ಪೆಂಡ್ ಮಾಡಲಾಗಿದ್ದು, ಇದೀಗ ಹಳೆಯ ಪ್ರಕರಣವೊಂದರಲ್ಲಿ ಅವ್ಯವಹಾರ ನಡೆಸಿದ್ದಾರೆನ್ನಲಾದ ಆರೋಪದಲ್ಲಿ ಕುಂದಾಪುರ ಉಪವಿಭಾಗಾಧಿಕಾರಿ ಮಹೇಶ್ಚಂದ್ರ ಅವರನ್ನು ಸಸ್ಪೆಂಡ್ ಮಾಡುವ ಮೂಲಕ ಡಿಸಿ ಮತ್ತು ಎಸಿ ನಡುವಿನ ಒಳ ಜಗಳ ಬಹಿರಂಗಗೊಂಡಿದೆ.
ಕುಂದಾಪುರ ಉಪವಿಭಾಗಾಧಿಕಾರಿ, ಕೆ ಎ ಎಸ್ ಅಧಿಕಾರಿ ಮಹೇಶ್ಚಂದ್ರ ಅವರನ್ನು ಇಲಾಖಾ ವಿಚಾರಣೆಯನ್ನು ಬಾಕಿ ಇರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಸರ್ಕಾರ ಆದೇಶ ಹೊರಡಿಸಲಾಗಿದೆ.
ಕುಂದಾಪುರದ ಉಪ ವಿಭಾಗಾಧಿಕಾರಿ ಮಹೇಶ್ಚಂದ್ರ ಅವರು ಈ ಹಿಂದೆ ಉಡುಪಿಯ ನಗರ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿದ್ದ ಸಂದರ್ಭದಲ್ಲಿ ಉಡುಪಿ ತಾಲೂಕಿನ ಬಡಾನಿಡಿಯೂರು ಗ್ರಾಮದ ಜಾಗದಲ್ಲಿ ಇರುವ ವಾಣಿಜ್ಯ ಉದ್ದೇಶದ ರೆಸಾರ್ಟ್ ನಿರ್ಮಾಣದ ವಿಚಾರದಲ್ಲಿ ಉದ್ಯಾವನ ಮತ್ತು ಬಯಲು ಜಾಗದ ವಲಯದಿಂದ ವಾಣಿಜ್ಯ ವಲಯಕ್ಕೆ ಭೂ ಉಪಯೋಗ ಬದಲಾವಣೆಗೆ ಸಂಬಂಧಿಸಿ ನಕಲಿ ಕಡತ ಸೃಷ್ಟಿಸಲಾಗಿದೆ ಎನ್ನುವ ಕಾರಣ ನೀಡಿ ಅಮಾನತು ಮಾಡಲಾಗಿದೆ.
ಉಪವಿಭಾಗಾಧಿಕಾರಿ ಮಹೇಶ್ಚಂದ್ರ ಅವರ ಕರ್ತವ್ಯ ಲೋಪದ ಬಗ್ಗೆ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸರ್ಕಾರಕ್ಕೆ ವಿಸ್ತ್ರತ ವರದಿ ಸಲ್ಲಿಸಿದ್ದು, ಡಿಸಿಯವರ ವರದಿ ಆಧರಿಸಿ ಸರ್ಕಾರದ ಅಧೀನ ಕಾರ್ಯದರ್ಶಿ ಈ ಆದೇಶ ಹೊರಡಿಸಿದ್ದಾರೆ.
ಒಟ್ಟಾರೆಯಾಗಿ ಐಎಎಸ್ ಹಾಗೂ ಕೆಎಎಸ್ ಅಧಿಕಾರಿಗಳ ನಡುವಿನ ಸಂಘರ್ಷ ಬೀದಿ ಜಗಳವಾಗಿದ್ದು ಮಾತ್ರ ಕರಾವಳಿ ಜನರಿಗೆ ಮನೋರಂಜನೆ ನೀಡುತ್ತಿದೆ ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.