ಕುಂದಾಪುರ: ವಂಡ್ಸೆ ಹೋಬಳಿಯ ಫಲಾನುಭವಿಗಳಿಗೆ ಏಪ್ರಿಲ್ ಅಂತ್ಯದೊಳಗೆ ಭೂ ಮಂಜೂರು – ಶಾಸಕ ಗಂಟಿಹೊಳೆ ಸೂಚನೆ

ಕುಂದಾಪುರ: ಬೈಂದೂರು ವಿಧಾನಸಭಾ ಕ್ಷೇತ್ರದ ವಂಡ್ಸೆ ಹೋಬಳಿಯ ಗ್ರಾಮಗಳಿಗೆ ಸಂಬಂಧಿಸಿದಂತೆ ಬಾಕಿ ಇರುವ ಅರ್ಹ 94 ಸಿ ಅರ್ಜಿಗಳನ್ನು ಮುಂದಿನ ತಿಂಗಳು ಏಪ್ರಿಲ್ ಅಂತ್ಯದೊಳಗೆ ವಿಲೇವಾರಿ ಮಾಡಿ ಅರ್ಹರಿಗೆ ಹಕ್ಕು ಪತ್ರ ವಿತರಿಸಲು ಕ್ರಮ ಕೈಗೊಳ್ಳುವಂತೆ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಕುಂದಾಪುರ ತಾಲೂಕು ಕಚೇರಿಯಲ್ಲಿ ವಂಡ್ಸೆ ಹೋಬಳಿಯ ಗ್ರಾಮಗಳಿಗೆ ಸಂಬಂಧಿಸಿದಂತೆ 94 ಸಿ ಅರ್ಜಿಗಳ ವಿಲೇವಾರಿ ಸಂಬಂಧ ಇಲಾಖಾಧಿಕಾರಿಗಳೊಂದಿಗೆ ಸಭೆ ನಡೆಸಿದ ಶಾಸಕರು 10 ಗ್ರಾಮಗಳ ಸುಮಾರು 20 ಅರ್ಹ ಕುಟುಂಬಗಳಿಗೆ ಇದೇ ಸಂದರ್ಭದಲ್ಲಿ ಹಕ್ಕು ಪತ್ರ ವಿತರಿಸಿ ಮಾತನಾಡಿದರು.

ಕುಂದಾಪುರ ತಾಲೂಕಿನ ಗ್ರಾಮ ಆಡಳಿತಾಧಿಕಾರಿಗಳ ತಂಡ ಹಾಗೂ ತಾಲೂಕು ಕಚೇರಿ ಅಧಿಕಾರಿಗಳ ತಂಡ 94 ಸಿ ಹಾಗೂ ಅಕ್ರಮ ಸಕ್ರಮ ಕಡತ ಗಳ ವಿಲೇವಾರಿ ಗೊಳಿಸಲು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದ ಅವರು, ಕ್ಷೇತ್ರದ ಬಡ ಜನರ ಹಲವಾರು ವರ್ಷಗಳ ಭೂಮಿಯ ಹಕ್ಕು ಪತ್ರ ಪಡೆಯುವ ಬೇಡಿಕೆಗಳನ್ನು ಈಡೇರಿಸುತ್ತಿರುವ ಕುಂದಾಪುರ ತಾಲೂಕಿನ ಎಲ್ಲಾ ಹಂತದ ಕಂದಾಯ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಫಲಾನುಭವಿಗಳು ಪಡೆದುಕೊಂಡ ಭೂಮಿಗಳನ್ನು ಕಾಪಾಡಿಕೊಂಡು ಬಂದು ಉತ್ತಮ ಜೀವನ ರೂಪಿಸಿಕೊಳ್ಳುವಂತಾಗಲಿ ಎಂದರು. ಸಭೆಯಲ್ಲಿ ಕುಂದಾಪುರ ತಹಶೀಲ್ದಾರ್ ಪ್ರದೀಪ್ ಕುರುಡೇಕರ್, ಉಪ ತಹಸೀಲ್ದಾರ್ ಪ್ರಕಾಶ್, ಕಂದಾಯ ನಿರೀಕ್ಷಕ ರಾಘವೇಂದ್ರ ಹಾಗೂ ವಂಡ್ಸೆ ಹೋಬಳಿಯ ಎಲ್ಲಾ ಗ್ರಾಮ ಆಡಳಿತ ಅಧಿಕಾರಿಗಳು ಉಪಸ್ಥಿತರಿದ್ದರು.