ಬೈಂದೂರು: ಇಂದು ಅಂಜಲಿ ಆಸ್ಪತ್ರೆಯಲ್ಲಿ ತುರ್ತು, ಡಯಾಲಿಸಿಸ್ ಮತ್ತು ವಿಶೇಷ ಆರೋಗ್ಯ ಸೇವೆಗಳ ಉದ್ಘಾಟನೆ
ಕುಂದಾಪುರ: ನಿರಂತರ ಹೋರಾಟದ ಪ್ರತಿಫಲವಾಗಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ, ಸಮೃದ್ಧ ಜನಸೇವಾ ಚಾರಿಟೇಬಲ್ ಟ್ರಸ್ಟ್ ಹಾಗೂ ಅಂಜಲಿ ಆಸ್ಪತ್ರೆಯ ಸಹಯೋಗದೊಂದಿಗೆ ಬೈಂದೂರಿನ ಅಂಜಲಿ ಆಸ್ಪತ್ರೆಯಲ್ಲಿ ಇಂದು ಶನಿವಾರ ಮಾರ್ಚ್ 8ರಂದು ಬೆಳಿಗ್ಗೆ ತುರ್ತು, ಡಯಾಲಿಸಿಸ್ ಮತ್ತು ವಿಶೇಷ ಆರೋಗ್ಯ ಸೇವೆಗಳು ಲೋಕಾರ್ಪಣೆಗೊಳ್ಳಲಿವೆ. ಈ ಬಗ್ಗೆ ಅಂಜಲಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಅಣ್ಣಪ್ಪ ಶೆಟ್ಟಿ, ಗ್ರಾಮೀಣ ಭಾಗಗಳಲ್ಲಿ ಸಾಕಷ್ಟು ತುರ್ತು ಚಿಕಿತ್ಸೆಗೆ ಸಂಬಂಧಪಟ್ಟಂತೆ ಮಣಿಪಾಲ ಅಥವಾ ಕುಂದಾಪುರಕ್ಕೆ ಹೋಗಬೇಕಾದ ಪರಿಸ್ಥಿತಿಯನ್ನು ಮನಗಂಡು ತುರ್ತು ಚಿಕಿತ್ಸೆ ಹಾಗೂ ಡಯಾಲಿಸಿಸ್ ಕೇಂದ್ರ ಸ್ಥಾಪನೆ ಮಾಡಿದ್ದೇವೆ ಎಂದರು.

ಶಾಸಕ ಗುರುರಾಜ್ ಗಂಟಿಹೊಳೆ ಪ್ರತಿಕ್ರಿಯಿಸಿ, ಬೈಂದೂರು ವ್ಯಾಪ್ತಿಯಲ್ಲಿ ಇದುವರೆಗೆ ಯಾವುದೇ ತುರ್ತು ಚಿಕಿತ್ಸಾ ಘಟಕವಾಗಲೀ, ಡಯಾಲಿಸಿಸ್ ಕೇಂದ್ರವಾಗಲೀ ಇಲ್ಲದೇ ಬಹಳಷ್ಟು ಸಮಸ್ಯೆಯಾಗುತ್ತಿದ್ದು, ಅಂಜಲಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಅಣ್ಣಪ್ಪ ಶೆಟ್ಟಿ ಮಾನವೀಯತೆ ಮೆರೆದಿದ್ದಾರೆ ಎಂದರು.

ಸಮೃದ್ಧ ಜನಸೇವಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬಿ.ಎಸ್.ಸುರೇಶ್ ಶೆಟ್ಟಿ ಪ್ರತಿಕ್ರಿಯಿಸಿ, ಸಮೃದ್ಧ ಜನಸೇವಾ ಚಾರಿಟೇಬಲ್ ಟ್ರಸ್ಟ್ ಗ್ರಾಮೀಣ ಭಾಗದಲ್ಲಿ ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗಕ್ಕೆ ಆದ್ಯತೆ ನೀಡುತ್ತಿದೆ. ಆಕಸ್ಮಿಕ ತತರ್ತು ಸಮಸ್ಯೆಗಳಿಗೆ ಮತ್ತು ಡಯಾಲಿಸಿಸ್ ಸೌಲಭ್ಯಗಳನ್ನು ಅಂಜಲಿ ಆಸ್ಪತ್ರೆಯಲ್ಲಿ ಮಾಡಲಾಗಿದ್ದು, ಅದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿಯ ಸಹ-ಕುಲಪತಿಗಳಾದ ಡಾ. ಎಚ್. ಎಸ್. ಬಲ್ಲಾಳ, ಶಿವಮೊಗ್ಗ ಲೋಕಸಭಾ ಸದಸ್ಯ ಬಿ. ವೈ. ರಾಘವೇಂದ್ರ ಭಾಗವಹಿಸಲಿದ್ದಾರೆ. ಹುಬ್ಬಳ್ಳಿ ಬಂಟರ ಸಂಘದ ಮಾಜೀ ಅಧ್ಯಕ್ಷ, ಚಾರ್ಟರ್ಡ್ ಅಕೌಂಟೆಂಟ್ ಎಸ್. ಬಿ. ಶೆಟ್ಟಿ, ಎಫ್‌ಸಿಎ, ವಿಜಯ ಬ್ಯಾಂಕ್ ನಿವೃತ್ತ ಹಿರಿಯ ವ್ಯವಸ್ಥಾಪಕ ನಾಕಟ್ಟೆ ತಿಮ್ಮಪ್ಪ ಶೆಟ್ಟಿ, ಸಮೃದ್ಧ ಜನಸೇವಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬಿ. ಎಸ್. ಸುರೇಶ್ ಶೆಟ್ಟಿ, ಕುಂದಾಪುರ ತಾಲೂಕು ಆರೋಗ್ಯ ಅಧಿಕಾರಿ ಡಾ. ಪ್ರೇಮಾನಂದ ಕೆ, ಶ್ರೀ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬಾಬು ಶೆಟ್ಟಿ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ, ಮಣಿಪಾಲದ ಮಾಹೆ ಬೋಧನಾ ಆಸ್ಪತ್ರೆಗಳ ಮುಖ್ಯ ಕಾರ್ಯಾಚರಣಾ ಅಧಿಕಾರಿ ಡಾ. ಆನಂದ್ ವೇಣುಗೋಪಾಲ್, ಬೈಂದೂರು ಅಂಜಲಿ ಆಸ್ಪತ್ರೆ ವ್ಯವಸ್ಥಾಪನಾ ನಿರ್ದೇಶಕ ಡಾ. ಅಣ್ಣಪ್ಪ ಶೆಟ್ಟಿ ಗೌರವ ಉಪಸ್ಥಿತರಿರುತ್ತಾರೆ ಎಂದು ಡಾ. ಅಣ್ಣಪ್ಪ ಶೆಟ್ಟಿ ತಿಳಿಸಿದ್ದಾರೆ.
