ಕುಂದಾಪುರ: ಚೆಕ್ ಅಮಾನ್ಯ ಪ್ರಕರಣ ಆರೋಪಿ ದೋಷಮುಕ್ತಿ
ಕುಂದಾಪುರ : ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮೊಳಹಳ್ಳಿ ಗ್ರಾಮದ ನಿವಾಸಿ ಲೋಕೇಶ್‌ರವರನ್ನು ಗೌರಿಬಿದನೂರಿನ ಮಾನ್ಯ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಹಾಗೂ ಪ್ರಥಮದರ್ಜೆ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯವು ದೋಷಮುಕ್ತಗೊಳಿಸಿ ಆದೇಶಿಸಿದೆ.

ಲೋಕೇಶ್ ಸಹೋದರ ಪ್ರವೀಣ್‌ರವರು ಗೌರಿಬಿದನೂರು ತಾಲೂಕಿನ ತೊಂಡೆಬಾವಿಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸಾಲವನ್ನು ಪಡೆದಿದ್ದು ಸದ್ರಿ ಸಾಲಕ್ಕೆ ದೂರುದಾರರ ಮಗ ಗೌರಿಬಿದನೂರು ಪೊಲೀಸ್ ಠಾಣೆಯ ಮುಖ್ಯ ಪೇದೆ ರವಿಕುಮಾರ್‌ರವರು ಜಾಮೀನುದಾರರಾಗಿರುತ್ತಾರೆ. ಕೋವಿಡ್ ಸಮಯದಲ್ಲಿ ಪ್ರವೀಣ್‌ರವರಿಗೆ ಸಾಲವನ್ನು ಮರುಪಾವತಿಸಲು ಅನಾನುಕೂಲವಾಗಿದ್ದು ಈ ಬಗ್ಗೆ ಆತನ ಸಂಪೂರ್ಣ ಸಾಲವನ್ನು ರವಿಕುಮಾರ್‌ರವರೇ ಪಾವತಿಸಿದ್ದರು. ನಂತರ ಪ್ರವೀಣ್‌ರವರು ರವಿಕುಮಾರ್‌ರವರಿಗೆ ಹಣವನ್ನು ಮರುಪಾವತಿ ಮಾಡಿದ್ದರು. ಆದರೆ ರವಿಕುಮಾರ್ ಇನ್ನೂ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದರು. ರವಿಕುಮಾರ್‌ರವರು ಗೌರಿಬಿದನೂರು ಠಾಣೆಯ ತನ್ನ ಸಹೋದ್ಯೋಗಿ ಸಿಬ್ಬಂದಿಗಳೊಂದಿಗೆ ಕೋಟ ಪೊಲೀಸ್ ಠಾಣೆಯ ಸಿಬ್ಬಂದಿ ರಾಜೇಶ್‌ರವರ ಸಹಾಯದಿಂದ ಪ್ರವೀಣ್‌ರವರನ್ನು ಸುತ್ತುವರಿದು ಲೋಕೇಶ್ ಅವರ ಖಾಲಿ ಚೆಕ್‌ಗಳನ್ನು ಪಡೆದು ಕೋಟ ಪೊಲೀಸ್ ಠಾಣೆಯಲ್ಲಿ ಅಕ್ರಮ ಬಂಧನದಲ್ಲಿಟ್ಟಿದ್ದರು.
ಆದರೆ ಅಲ್ಲಿಂದ ತಪ್ಪಿಸಿಕೊಂಡ ಪ್ರವೀಣ್ ಇಲಾಖೆಯ ಮೇಲಾಧಿಕಾರಿಗಳಿಗೆ ದೂರು ನೀಡಿದ್ದು ತನಿಖೆ ನಡೆಯುತ್ತಿತ್ತು. ಈ ಮಧ್ಯೆ ಲೋಕೇಶ್ ರ ಎರಡು ಚೆಕ್‌ಗಳನ್ನು ರವಿಕುಮಾರ್ ತನ್ನ ತಂದೆ ಹಾಗೂ ತಾಯಿಯ ಹೆಸರಿನಲ್ಲಿ ನಗದೀಕರಣಕ್ಕೆ ಹಾಕಿದ್ದ. ಆದರೆ ಲೋಕೇಶ್ ಖಾತೆಯಲ್ಲಿ ಸಾಕಷ್ಟು ಹಣ ಇಲ್ಲದ ಕಾರಣ ಚೆಕ್ ಬೌನ್ಸ್ ಆಗಿತ್ತು. ಈ ಬಗ್ಗೆ ರವಿಕುಮಾರ್ ತನ್ನ ತಂದೆಯ ಮೂಲಕ ಗೌರಿಬಿದನೂರಿನ ನ್ಯಾಯಾಲಯದಲ್ಲಿ ಚೆಕ್ ಬೌನ್ಸ್ ಕೇಸ್ ದಾಖಲಿಸಿದ್ದರು. ವಾದವಿವಾದಗಳನ್ನು ಆಲಿಸಿದ ನ್ಯಾಯಾಲಯವು ಲೋಕೇಶರನ್ನು ದೋಷಮುಕ್ತಗೊಳಿಸಿ ಆದೇಶಿಸಿದೆ. ಆರೋಪಿ ಲೋಕೇಶ್ ಪರವಾಗಿ ಗೌರಿಬಿದನೂರು ನ್ಯಾಯಾಲಯದಲ್ಲಿ ಕುಂದಾಪುರದ ವಕೀಲ ನೀಲ್ ಬ್ರಿಯಾನ್ ಪಿರೇರಾ ವಾದಿಸಿದ್ದರು.
