ಕುಂದಾಪುರ: ಅಪರಾಧ ತಡೆಗೆ ಸಂಚಾರಿ ಪೊಲೀಸರಿಂದ ಹೊಸ ನಡೆ – ಬಾಡಿಗೆ ಆಟೋಗಳಿಗೆ ಐಡಿ ಸ್ಟಿಕ್ಕರ್ ವಿತರಣೆ

ಕುಂದಾಪುರ: ಪುರಸಭಾ ವ್ಯಾಪ್ತಿಯೊಳಗೆ ನಡೆಯಬಹುದಾದ ಸಂಭಾವ್ಯ ಅಪರಾಧಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಕುಂದಾಪುರ ಸಂಚಾರಿ ಪೊಲೀಸರು ಹೊಸ ಹೆಜ್ಜೆ ಇಟ್ಟಿದ್ದಾರೆ. ಆಟೋ ಚಾಲಕರು ಮತ್ತು ಪ್ರಯಾಣಿಕರ ನಡುವಿನ ಗೊಂದಲ ತಪ್ಪಿಸಲು, ಚಾಲಕರು ಮತ್ತು ಆಟೋ ರಿಕ್ಷಾದ ಸಂಪೂರ್ಣ ವಿವರಗಳನ್ನೊಳಗಂಡ ದಾಖಲೆಗಳನ್ನು ಸಂಗ್ರಹಿಸಿಟ್ಟುಕೊಂಡು ಯಾವುದೇ ರೀತಿಯ ಸಂದರ್ಭದಲ್ಲಿ ಅದರ ಉಪಯೋಗಪಡೆಯಲು, ಅನಧೀಕೃತ ಆಟೋ ರಿಕ್ಷಾಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪ್ರತಿ ಆಟೋ ರಿಕ್ಷಾಗಳಿಗೆ ಅಧಿಕೃತ ಗುರುತಿನ ಸ್ಟಿಕ್ಕರ್ ಅಳವಡಿಸು ಕಾರ್ಯಕ್ರಮಕ್ಕೆ ಭಾನುವಾರ ಕುಂದಾಪುರದಲ್ಲಿ ಚಾಲನೆ ನೀಡಲಾಯಿತು.


ಕುಂದಾಪುರ ಉಪವಿಭಾಗದ ಡಿವೈಎಸ್ಪಿ ಬೆಳ್ಳಿಯಪ್ಪ ಕೆ.ಯು ರವಿವಾರ ಬೆಳಿಗ್ಗೆ ಸಂಚಾರ ಠಾಣೆ ಎದುರು ಪುರಸಭೆ ವ್ಯಾಪ್ತಿಯ ಆಟೋ ರಿಕ್ಷಾಗಳಿಗೆ ಗುರುತು ಸಂಖ್ಯೆಯಿರುವ ಸ್ಟಿಕ್ಕರ್ ಅನ್ನು ವಿತರಿಸಿದರು. ಈ ಸಂದರ್ಭ ಮಾತನಾಡಿದ ಅವರು, ಆಟೋ ರಿಕ್ಷಾ ಹಾಗೂ ಚಾಲಕರ ವಿವರಗಳು ಠಾಣೆಯಲ್ಲಿ ದಾಖಲಾಗಿರುತ್ತದೆ. ಪುರಸಭೆ ವ್ಯಾಪ್ತಿಯಲ್ಲಿ 200 ಅಧೀಕೃತ ಆಟೋರಿಕ್ಷಾಗಳಿದ್ದು ಸ್ಟಿಕ್ಕರ್ ಆಧಾರದಲ್ಲಿ ಅನಧಿಕೃತ ಆಟೋಗಳ ಮೇಲೆ ನಿಗಾ ವಹಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ಎಲ್ಲಾ ಕಡೆ ಇದನ್ನು ಅನುಷ್ಠಾನ ಮಾಡುವ ಚಿಂತನೆಯಿದೆ ಎಂದರು.


ಈ ಸಂದರ್ಭ ಕುಂದಾಪುರ ನಗರ ಸಂಚಾರೀ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಪ್ರಸಾದ್ ಕುಮಾರ್ ಕೆ., ಸುದರ್ಶನ್ ಹಾಗೂ ಸಿಬ್ಬಂದಿಗಳು ಇದ್ದರು.