ಕೋಟ: ಭಾಷೆ, ಪ್ರೀತಿ ಜೊತೆಯಾದಾಗ ಸಂಬಂಧ ಗಟ್ಟಿ – ಚಿತ್ರನಟ ರಘು ಪಾಂಡೇಶ್ವರ

ಕೋಟ: ಭಾಷೆ ಹಾಗೂ ಪ್ರೀತಿ ಜೊತೆಯಾದಾಗ ಬಾಂಧವ್ಯ ಗಟ್ಟಿಯಾಗುತ್ತದೆ. ಈ ನಿಟ್ಟಿನಲ್ಲಿ ಭಾಷೆಯ ಜೊತೆಗೆ ಪ್ರೀತಿಯನ್ನು ವೃದ್ಧಿಸಿ ಎಂದು ಚಿತ್ರನಟ ರಘು ಪಾಂಡೇಶ್ವರ ಹೇಳಿದರು. ಕೋಟದ ಹಂದಟ್ಟು ಗೆಳೆಯರ ಬಳಗ ಸಭಾಂಗಣದಲ್ಲಿ ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ ಮಾತೃ ಸಂಸ್ಥೆ ಪಂಚವರ್ಣ ಯುವಕ ಮಂಡಲ ಕೋಟ ಇದರ ಮಾರ್ಗದರ್ಶನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಬ್ರಹ್ಮಾವರ ಘಟಕದ ಸಹಯೋಗದೊಂದಿಗೆ ಆಸಾಡಿ ಒಡ್ರ್ -2024 ಊರ್ ಕೇರಿ ಬದ್ಕಿನ್ ಹಬ್ಬು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಗೀತಾನಂದ ಫೌಂಡೇಶನ್ ಮಣೂರು ಪ್ರವರ್ತಕ ಆನಂದ್ ಸಿ ಕುಂದರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಸಾಪ ಬ್ರಹ್ಮಾವರ ತಾಲೂಕು ಘಟಕದ ಅಧ್ಯಕ್ಷ ಗುಂಡ್ಮಿ ರಾಮಚಂದ್ರ ಐತಾಳ್ ಗ್ರಾಮೀಣ ಪರಿಕರವನ್ನು ಉದ್ಘಾಟಿಸಿದರೆ, ಆಸಾಡಿ ಒಡ್ರ್ ಗ್ರಾಮೀಣ ತಿನಿಸುಗಳನ್ನು ಸಾಂಸ್ಕೃತಿಕ ಚಿಂತಕಿ ಪ್ರತಿಭಾ ಎಸ್ ಕುಂದರ್ ಅನಾವರಣಗೊಳಿಸಿದರು. ಗೋಪಾಡಿ ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷೆ ಸರಸ್ವತಿ ಜಿ ಪುತ್ರನ್ ಸಭಾ ಕಾರ್ಯಕ್ರಮವನ್ನು ತೆಂಗಿನ ಹೂ ಅರಳಿಸುವ ಮೂಲಕ ಚಾಲನೆ ನೀಡಿದರು. ಕುಂದಗನ್ನಡದ ಬಹುಮುಖ ಪ್ರತಿಭೆ ಸುಜಾತ ಎಂ ಬಾಯರಿಯವರಿಗೆ ಆಸಾಡಿ ಒಡ್ರ್ ಸಾಧಕ ಪುರಸ್ಕಾರ ನೀಡಲಾಯಿತು. ಪಂಚವರ್ಣ ಮಹಿಳಾ ಮಂಡಲದ ಪ್ರಥಮ ಅಧ್ಯಕ್ಷೆ ಕಲಾವತಿ ಅಶೋಕ್ ಗೆ ವಿಶೇಷ ಅಭಿನಂದನೆ ಸಲ್ಲಿಸಲಾಯಿತು. ಇದೇ ಸಂದರ್ಭ ಚಿತ್ರನಟ ರಘು ಪಾಂಡೇಶ್ವರನ್ನು ಸನ್ಮಾನಿಸಲಾಯಿತು.

ಹಂದಟ್ಟು ಮಹಿಳಾ ಬಳಗದ ವತಿಯಿಂದ ಮಟಪಾಡಿಯ ವಿಜಯಬಾಲನಿಕೇತ ಬಾಲಾಶ್ರಮಕ್ಕೆ ದಿನಸಿ ಪರಿಕರವನ್ನು ಹಂದಟ್ಟು ಮಹಿಳಾ ಬಳಗದ ಅಧ್ಯಕ್ಷೆ ರತ್ನಾ ಪೂಜಾರಿ ಆಶ್ರಮದ ಮುಖ್ಯಸ್ಥರಿಗೆ ಹಸ್ತಾಂತರಿಸಿದರು. ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಅಧ್ಯಕ್ಷತೆಯನ್ನು ವಹಿಸಿದ್ದರು. ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಶೆಣೈ ಕೋಟ, ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ಅಧ್ಯಕ್ಷೆ ಲಿಲಾವತಿ ಗಂಗಾಧರ್, ಪಂಚವರ್ಣ ಮಹಿಳಾ ಮಂಡಲದ ಗೌರವಾಧ್ಯಕ್ಷೆ ಕುಸುಮಾ ದೇವಾಡಿಗ, ಪಂಚವರ್ಣ ಯುವಕ ಮಂಡಲದ ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ ಮತ್ತಿತರರು ಉಪಸ್ಥಿತರಿದ್ದರು. ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ನರೇಂದ್ರ ಕುಮಾರ್ ಕೋಟ ನಿರೂಪಿಸಿದರೆ,ಪಂಚವರ್ಣ ಮಹಿಳಾ ಮಂಡಲದ ಸದಸ್ಯೆ ವೀಣಾ ಪ್ರಕಾಶ್ ಸ್ವಾಗತಿಸಿ, ಜತೆಕಾರ್ಯದರ್ಶಿ ಶಕೀಲ ಎನ್ ಪೂಜಾರಿ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಕೋಶಾಧಿಕಾರಿ ಸುಜಾತ ಉದಯ್ ತಿಂಗಳಾಯ ವಂದಿಸಿದರು.ಕಾರ್ಯಕ್ರಮವನ್ನು ಯುವಕ ಮಂಡಲದ ಕಾರ್ಯಾಧ್ಯಕ್ಷ ರವೀಂದ್ರ ಕೋಟ ಸಂಯೋಜಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮೀಣ ಪರಿಕರಗಳಾದ ಚೆನ್ನೆಮಣೆ, ಕೊಪ್ಪರಿಗೆ, ನೇಗಿಲು ನೋಗ, ತಾಮ್ರದ ಹರಿ, ಮಣ್ ಮರ್ಗಿ, ಹಳೆಯ ಕಾಲದ ಗಡಿಯಾರ, ಗಾಡಿ ಕೂಸಣ್ಣನ ಎತ್ತಿನಗಾಡಿ, ಗಿರೀಜಾ ಬೋಜಣ್ಣ ಇವರ ಕಂಬಳ ಪರಿಕರ,ಸಾಂಬಾರ್ ಬಟ್ಲ್,ನರೋಳಿ ಸೊಪ್ಪಿನ ದೊಸೆ,ಬೆಸಿದ ಕಡ್ಲೆ,ಅಕ್ಕಿ ಉಂಡಿ, ಹೀಗೆ 80ಕ್ಕೂ ಅಧಿಕ ಬಗೆಯ ತಿಂಡಿ ತಿನಿಸುಗಳ ಸ್ಪರ್ಧೆಯಲ್ಲಿ ಕಂಡುಬಂತು. ಮಣೂರು ಜಯರಾಮ ಶೆಟ್ಟಿ ಹಾಗೂ ಹಂದಟ್ಟು ಸುಬ್ಬಯ್ಯ ಪೂಜಾರಿ ಹೊಲಿ ಕರೆಯುವ ದೃಶ್ಯ ವಿಶೇಷವಾಗಿ ಗಮನ ಸೆಳೆಯಿತು. ಕಾರ್ಯಕ್ರಮ
ಆಸಾಡಿ ಒಡ್ರ್ ಕಾರ್ಯಕ್ರಮದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವಿಶಿಷ್ಠವಾಗಿ ಪಂಚವರ್ಣ ಮಹಿಳಾ ಮಂಡಲದ ಪದಾಧಿಕಾರಿಗಳು ಹಳೆಯ ಸಂಪ್ರದಾಯದಂತೆ ವಿಳ್ಯೆದೆಲೆ, ಅಡಿಕೆ, ತುಳಸಿ ಕಟ್ಟೆ, ಕಳಶ , ಅರಸಿನ ಕುಂಕುಮ, ಬಳೆ, ಹೂವು, ಸಿಂಗಾರ, ಹಣ್ಣು, ನೀರು ಬೆಲ್ಲ ಹಿಡಿದು ವೇದಿಕೆಯ ಮೇಲೆ ತಂದಿರಿಸಿ ಗಣ್ಯರನ್ನು ಸ್ವಾಗತಿಸಿದರು. ಸ್ನೇಹಕೂಟದ ಸಂಚಾಲಕಿ ಭಾರತಿ ವಿ ಮಯ್ಯ ಉದ್ಘಾಟಿಸಿದರು.


