ಹಟ್ಟಿಅಂಗಡಿ: ಸಿದ್ಧಿವಿನಾಯಕ ವಸತಿ ಶಾಲೆಗೆ ರಾಷ್ಟ್ರೀಯ ಗ್ರೀನ್ ಫ್ಲ್ಯಾಗ್ ಪ್ರಶಸ್ತಿ
ಕುಂದಾಪುರ: ಕಳೆದ ವರ್ಷ ಅವಳಿ ಗಿನ್ನಿಸ್ ದಾಖಲೆಗಳ ಮೂಲಕ ಇತಿಹಾಸ ನಿರ್ಮಿಸಿದ್ದ ಕುಂದಾಪುರದ ಹಟ್ಟಿಅಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿಶಾಲೆಗೆ ರಾಷ್ಟ್ರೀಯ ಮಟ್ಟದ ಗ್ರೀನ್ ಫ್ಲ್ಯಾಗ್ ಅವಾರ್ಡ್ ಲಭಿಸಿದೆ.

ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಜುಲೈ 27ರಂದು ಮಾನವ ಸಂಗ್ರಹಾಲಯ ಮತ್ತು ಪರ್ಯಾವರ್ಣ ಶಿಕ್ಷಾ ಕೇಂದ್ರದ ಸಹಯೋಗದಲ್ಲಿ ರಾಕ್ ಆರ್ಟ್ ಸಭಾಂಗಣದಲ್ಲಿ ನಡೆದ ಎರಡು ದಿನಗಳ ಕಾರ್ಯಾಗಾರದ ವಾರ್ಷಿಕ ಪುರಸ್ಕಾರದ ಸಮಾರೋಪ ಸಮಾರಂಭದಲ್ಲಿ ಗ್ರೀನ್ ಫ್ಲ್ಯಾಗ್ ಪ್ರಶಸ್ತಿ ಪ್ರದಾನಿಸಲಾಯಿತು. ಇಕೋ ಸ್ಕೂಲ್ ಆಫ್‌ಇಂಡಿಯಾ ಮತ್ತು ಎಫ್.ಇ.ಇ- ಗ್ಲೋಬಲ್‌ನವರು ಕೊಡಮಾಡುವ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಇಂದಿರಾಗಾಂಧಿ ರಾಷ್ಟ್ರೀಯ ಮಾನವ ಸಂಗ್ರಹಾಲಯದ ನಿರ್ದೇಶಕ ಪ್ರೊ. ಅಮಿತಾಬ್ ಪಾಂಡೆ ಹಾಗೂ ಡಾ. ಸುನೀಲ್ ಉಮಾರಾವ್ ವಿತರಿಸಿ ಗೌರವಿಸಿದರು.
ಶಾಲೆಯಲ್ಲಿ ಹಮ್ಮಿಕೊಳ್ಳುವ ಪರಿಸರ ಸ್ನೇಹಿ ಕಾರ್ಯ ಚಟುವಟಿಕೆಗಳು, ಸ್ವಚ್ಛತೆಯ ಕಾರ್ಯ ವಿಧಾನಗಳು, ಮಾಹಿತಿ ಮತ್ತು ಜನಜಾಗೃತಿ ಕಾರ್ಯಕ್ರಮಗಳು ಇತ್ಯಾದಿ ಅಂಶಗಳ ಮಾನದಂಡದಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳೂ ಹಾಗೂ ಶಾಲಾ ಪ್ರಾಂಶುಪಾಲರೂ ಆದ ಶರಣಕುಮಾರ ಮತ್ತು ಶಾಲಾ ಆಡಳಿತಾಧಿಕಾರಿ ವೀಣಾ ರಶ್ಮೀ ಎಂ ಸಂಸ್ಥೆಯ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು. ಎರಡು ದಿನಗಳ ಕಾಲ ನಡೆದ ಈ ಕಾರ್ಯಗಾರದಲ್ಲಿ ದೇಶದ 40ಕ್ಕೂಅಧಿಕ ಶಾಲೆಗಳಿಂದ ಶಿಕ್ಷಕರು ಆಗಮಿಸಿದ್ದರು.
