ಯಡಮೊಗ್ಗೆ: ದಶಕದ ಕನಸು ನನಸು – ಘನವಾಹನ ಚೆಸ್ಸಿ ಕಾಲುಸಂಕ ಲೋಕಾರ್ಪಣೆ
ಕುಂದಾಪುರ: ಹಳೆಯ ಬಸ್ಸು ಲಾರಿಗಳ ಚೆಸ್ಸಿಗಳಿಂದ ನಿರ್ಮಿಸಿ ಕುತೂಹಲಕ್ಕೆಬಕಾರಣವಾಗಿದ್ದ ಎರಡು ಕಾಲುಸಂಕಗಳು ಇಂದು ಲೋಕಾರ್ಪಣೆಯಾಗುವ ಮೂಲಕ ಯಡಮೊಗ್ಗೆ ಹಾಗೂ ತೊಂಬಟ್ಟಿನ ಜನರ ದಶಕಗಳ ಕನಸು ನನಸಾದಂತಾಗಿದೆ.


ಶನಿವಾರ ಸಮೃದ್ಧ ಬೈಂದೂರು ಪರಿಕಲ್ಪನೆಯಲ್ಲಿ ಬೆಂಗಳೂರಿನ ಡಾ. ಆರ್. ಅರುಣಾಚಲಮ್ ಚಾರಿಟೇಬಲ್ ಟ್ರಸ್ಟ್ ಸಹಕಾರದೊಂದಿಗೆ ಯಡಮೊಗೆಯ ರಾಂಪಯ್ಯಜಡ್ಡು ಹಾಗೂ ಕುಮ್ಟಿಬೇರು ಸಂಪರ್ಕಿಸುವ ಮತ್ತು ತೊಂಬಟ್ಟುವಿನ ಕಬ್ಬಿನಾಲೆ – ಗುಡ್ಡಿಮನೆ ಸಂಪರ್ಕಿಸುವಲ್ಲಿ ಎರಡು ಕಾಲುಸಂಕಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಬೈಂದೂರಿ ಶಾಸಕ ಗುರುರಾಜ್ ಗಂಟಿಹೊಳೆ, ನಮ್ಮೂರಿನ ಗ್ರಾಮೀಣ ಭಾಗಗಳ ಸಮಸ್ಯೆಗೆ ಬೆಂಗಳೂರಿನ ಅರುಣಾಚಲಮ್ ಟ್ರಸ್ಟ್ ಸ್ಪಂದಿಸಿರುವುದು ನಿಜಕ್ಕೂ ಶ್ಲಾಘನೀಯ. ಟ್ರಸ್ಟ್ ಸಹಕಾರ ಮತ್ತು ಸ್ಥಳೀಯ ಜನರ ಶ್ರಮದಿಂದ ಇಂದು ಸುಸಜ್ಜಿತ ಕಾಲು ಸಂಕ ನಿರ್ಮಾಣಗೊಂಡಿದೆ. ನಾನು ಮತ್ತು ಅನುದೀಪ್ ಹೆಗ್ಡೆ ಸೇರಿ ಸೇತುವೆಯ ರೀತಿಯಲ್ಲಿ ದಾನಿಗಳನ್ನು ಜೋಡಿಸುವ ಕೆಲಸ ಮಾಡಿದ್ದೇವೆ ಅಷ್ಟೇ, ಉಳಿದೆಲ್ಲವೂ ಕೂಡಾ ದೇವರು ದಾನಿಗಳ ಮೂಲಕ ಮಾಡಿಸಿದ್ದಾರೆ ಎಂದರು.



ಡಾ. ಆರ್. ಅರುಣಾಚಲಮ್ ಚಾರಿಟೇಬಲ್ ಟ್ರಸ್ಟ್ ನ ಟ್ರಸ್ಟಿ ಹಾಗೂ ದಾನಿ ಡಾ. ಆರ್. ಅರುಣಾಚಲಮ್ ಅವರ ಪುತ್ರ ಡಾ. ರಮೇಶ್ ಅರುಣ್ ಮಾತನಾಡಿ, ಬೈಂದೂರಿಗೆ ಕಾಲು ಸಂಕಗಳ ಅನಿವಾರ್ಯತೆಯನ್ನು ಶಾಸಕರು ತಿಳಿಸಿದಾಗ ಜನರ ಪರಿಸ್ಥಿತಿ ನೆನೆದು ದುಃಖವಾಗಿತ್ತು. ಕೂಡಲೇ ತಂದೆಯ ಸೂಚನೆಯಂತೆ ಸ್ಥಳಕ್ಕೆ ಭೇಟಿ ನೀಡಿ ಜನರ ಸಂಕಷ್ಟಗಳನ್ನು ಅರಿತುಕೊಂಡು ಕಾಲುಸಂಕ ನಿರ್ಮಾಣಕ್ಕೆ ಸಹಕರಿಸುವ ಭರವಸೆ ನೀಡಿದ್ದೆವು. ಅದರಂತೆ ಇಂದು ಕಾಲುಸಂಕ ನಿರ್ಮಾಣಗೊಂಡಿದೆ ಎಂದರು.


ಡಾ. ಆರ್. ಅರುಣಾಚಲಮ್ ಚಾರಿಟೇಬಲ್ ಟ್ರಸ್ಟ್ ನ ಟ್ರಸ್ಟಿಗಳಾದ ಡಾ. ರಮೇಶ್ ಅರುಣ್, ಬೆಂಗಳೂರು ಟ್ರಿಪ್ ನಿರ್ವಿಘ್ನ ಮಾರ್ಕೆಟಿಂಗ್ ಮುಖ್ಯಸ್ಥ ಅನುದೀಪ್ ಹೆಗ್ಡೆ, ಸಮೃದ್ಧ ಜನಸೇವಾ ಚಾರಿಟೇಬಲ್ ಟ್ರಸ್ಟ್ ಬೈಂದೂರು ಅಧ್ಯಕ್ಷ ಬಿ.ಎಸ್. ಸುರೇಶ್ ಶೆಟ್ಟಿ, ಬಾಲಚಂದ್ರ ಭಟ್, ಯಡಮೊಗೆ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಪ್ರಾಣೇಶ್ ಯಡಿಯಾಲ್, ಯಡಮೊಗೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮತಿ ಗಾಣಿಗ, ಕಮಲಶಿಲೆಯ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೆಸರ ಸಚ್ಚಿದಾನಂದ ಚಾತ್ರ, ಉಳ್ಳೂರು ಮಚ್ಚಟ್ಟು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನ ಮಾಜಿ ಅಧ್ಯಕ್ಷ ಟಿ. ಚಂದ್ರಶೇಖರ ಶೆಟ್ಟಿ, ಉಪಾಧ್ಯಕ್ಷ ಶೇಖರ ಪೂಜಾರಿ, ಅಮಾಸೆಬೈಲು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜಯಲಕ್ಷ್ಮಿ ಶೆಟ್ಟಿ, ತೊಂಬಟ್ಟು ಶ್ರೀ ಮಹಾಗಣಪತಿ ದೇವಸ್ಥಾನದ ಧರ್ಮದರ್ಶಿ, ಆಡಳಿತ ಮೊಕ್ತೇಸರ ಸತ್ಯನಾರಾಯಣ ಉಡುಪ ಮೊದಲಾದವರು ಉಪಸ್ಥಿತರಿದ್ದರು.
