ಕುಂದಾಪುರ: ಪರಿವರ್ತನೆಯ ಹರಿಕಾರ ಡಾ. ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ

ಕುಂದಾಪುರ: ಇಲ್ಲಿನ ಶ್ರೀಮಾತಾ ಅಸ್ಪತ್ರೆ ಮಾಲಕ ಹಾಗೂ ಕೋಟದ ಪರಿವರ್ತನ ಪೌಂಡೇಶನ್ ನ ಪ್ರವರ್ತಕರಾದ ಡಾ.ಸತೀಶ ಪೂಜಾರಿ (54) ಅವರು ಇಂದು ಗುರುವಾರ ಬೆಳಿಗ್ಗೆ ಅವರ ಕೋಟತಟ್ಟು ಮಣೂರು ಸ್ವಗೃಹದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಖ್ಯಾತ ಸಂಗೀತಗಾರರಾಗಿದ್ದ ಸತೀಶ್ ಪೂಜಾರಿ ಹಲವಾರು ಸಂಗೀತ ಕಾರ್ಯಕ್ರಮಗಳನ್ನು ಕುಂದಾಪುರದ ಸಂಗೀತ ಪ್ರಿಯರಿಗೆ ಉಣಬಡಿಸಿದ್ದರು. ಎಸ್. ಜಾನಕಿ, ಚಿತ್ರಾ ಮೊದಲಾದ ಕಲಾವಿದರ ಜೊತೆಗೆ ಅನ್ಯೋನ್ಯತೆ ಸಾಧಿಸಿದ್ದ ಡಾ. ಸತೀಶ್ ಪೂಜಾರಿ ಉತ್ತಮ ದೇಹದಾರ್ಡ್ಯವನ್ನು ಬೆಳೆಸಿಕೊಂಡಿದ್ದರು. ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ಅವರು, ಅತೀ ಹೆಚ್ಚಿನ ದೇಹದಂಡನೆಯಿಂದ ಹೃದಯಾಘಾತಕ್ಕೆ ಒಳಗಾದರೇ ಎನ್ನುವ ಅನುಮಾನಗಳೂ ಕಾಡುತ್ತಿವೆ. ಗುರುವಾರ ಬೆಳಿಗ್ಗೆ ಇದ್ದಕ್ಕಿದ್ದಂತೆ ತೀವ್ರ ಎದೆ ನೋವು ಕಾಣಿಸಿಕೊಂಡಿದ್ದು, ಮನೆಯವರ ಗಮನಕ್ಕೆ ಬರುತ್ತಿದ್ದಂತೆ ಆಸ್ಪತ್ರೆಗೆ ಸಾಗಿಸಲು ಯತ್ನಿಸಿದರಾದರೂ ಅದಾಗಲೇ ಅವರು ತೀರಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ನೂರಾರು ಮಾನಸಿಕ ರೋಗಿಗಳಿಗೆ ಚಿಕಿತ್ಸೆ ನೀಡಿದ್ದ ಅವರು, ಕೋಟದಲ್ಲಿ ಸ್ಥಾಪಿತವಾದ ಪರಿವರ್ತನಾ ಪೌಂಡೇಶನ್ ಮೂಲಕ ಮದ್ಯವಸ್ನ ಸೇರಿದಂತೆ ಮಾದಕ ಚಟಗಳಿಗೆ ೊಳಗಾಗಿದ್ದ ನೂರಾರು ಸಂತ್ರಸ್ಥರಿಗೆ ಪುನರ್ವಸತಿ ಸೌಲಭ್ಯ ಕಲ್ಪಿಸಿದ್ದರು.
ಸಂಗೀತದ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದ ಡಾ. ಸತೀಶ್ ಪೂಜಾರಿ ಅವರು ತಮ್ಮ ಸಂಗೀತ ಕಾರ್ಯಕ್ರಮದಲ್ಲಿ ನೂರಾರು ಸ್ಥಳೀಯ ಕಲಾವಿದರಿಗೆ ಅವಕಾಶ ಕಲ್ಪಿಸುತ್ತಿದ್ದರು. ಬಿಡುವಿನ ವೇಳೆಯಲ್ಲಿ ಪ್ರಕೃತಿಯ ಮಡಿಲಲ್ಲಿ ವಿಹರಿಸುತ್ತಿದ್ದ ಅವರು, ಪ್ರಕೃತಿಯ ದೃಶ್ಯ ಸೊಬಗನ್ನು ರೀಲ್ಸ್ ಮೂಲಕ ಜನರ ಮುಂದಿಡುತ್ತಿದ್ದರು. ಕಾರ್ಡಿಯಾಕ್ ಆರೆಸ್ಟ್ ಡಾ. ಸತೀಶ್ ಸಾವಿಗೆ ಕಾರಣ ಎಂದು ತಿಳಿದು ಬಂದಿದ್ದು, ಡಾ. ಪುನೀತ್ ಸಾವಿಗೂ ಇದೇ ಕಾರಣವಾಗಿತ್ತು ಎನ್ನುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಸದಾ ಹಸನ್ಮುಖಿಯಾಗಿದ್ದ ಡಾ. ಸತೀಶ್ ಪೂಜಾರಿ ಅಪಾರ ಸ್ನೇಹಿತರನ್ನು ಹೊಂದಿದ್ದರು. ಕುಂದಾಪುರ ಶ್ರೀ ಮಾತಾ ಆಸ್ಪತ್ರೆಯ ಮಾಲೀಕರಾಗಿ, ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ಮೃತರು ಹೆಂಡತಿ ಮತ್ತು ಓರ್ವ ಪುತ್ರ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
