ಬೈಂದೂರು: ಹೊಳೆದಾಟಲು ಪರದಾಟ, ವಿಶೇಷ ಮಕ್ಕಳ ಕುಟುಂಬಕ್ಕೆ ತಾತ್ಕಾಲಿಕ ವಸತಿ ವ್ಯವಸ್ಥೆ – ಶಾಸಕ ಗಂಟಿಹೊಳೆ

ಕುಂದಾಪುರ: ಬೈಂದೂರು ತಾಲೂಕಿನ ಯೆಳಜಿತ್ ಗ್ರಾಮದ ಹುಲ್ಕಡ್ಡಿ ಗುಡಿಕೇರಿಯಲ್ಲಿ ಕಾಲುಸಂಕ ಇಲ್ಲದೆ ಪರದಾಡುತ್ತಿರುವ ಗ್ರಾಮಸ್ಥರ ಸಂಕಷ್ಟದ ಸುದ್ದಿ ತಿಳಿದ ತಕ್ಷಣ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಭೇಟಿ ನೀಡಿ ಸಂತ್ರಸ್ಥರನ್ನು ಸಂತೈಸಿದ್ದಾರೆ.

ಸಂಕಷ್ಟದ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ ಶಾಸಕರು, ಮಳೆಗಾಲ ಮುಗಿದ ತಕ್ಷಣ ಕಾಲುಸಂಕ ನಿರ್ಮಿಸುವುದಾಗಿ ಭರವಸೆ ನೀಡಿದ್ದಾರೆ. ಮಳೆಗಾಲವಾದ್ದರಿಂದ ಸೇತುವೆ ಕಾಮಗಾರಿ ನಡೆಸಲು ಅಸಾಧ್ಯವಾದ ಕಾರಣ ಸದ್ಯ ವಿಶೇಷಚೇತನ ಮಕ್ಕಳ ಪರಿಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು ಮಳೆಗಾಲದ ಅವಧಿ ಮುಗಿಯುವವರೆಗೆ ತನ್ನ ಮನೆಯಲ್ಲೇ ವಾಸ ಮಾಡಲು ಅವಕಾಶ ಕಲ್ಪಿಸುವುದಾಗಿ ತಿಳಿಸಿದರು.

ಆದರೆ ಮಕ್ಕಳ ಪಾಲಕರು ಶಾಲೆ ದೂರವಾಗಲಿದೆ ಎಂದ ಕಾರಣ ತಾತ್ಕಾಲಿಕವಾಗಿ ಶಾಲೆಯ ಸಮೀಪ ಬೇರೆ ಮನೆ ವ್ಯವಸ್ಥೆ ಮಾಡಿಕೊಡುವ ವಾಗ್ದಾನ ನೀಡಿದ್ದಾರೆ. ಬಳಿಕ ಸ್ಥಳೀಯ ಕಾರ್ಯಕರ್ತರೊಂದಿಗೆ ಮಾತುಕತೆ ನಡೆಸಿ, ಇನ್ನು ಮುಂದೆ ಹುಲ್ಕಡ್ಕಿ ಗುಡಿಕೇರಿ ಭಾಗದ ಕುಟುಂಬಕ್ಕೆ ಯಾವುದೇ ಸಮಸ್ಯೆ ಎದುರಾದಲ್ಲಿ ತಕ್ಷಣ ತನ್ನ ಗಮನಕ್ಕೆ ತರಲು ಶಾಸಕರು ಇದೇ ವೇಳೆ ಸೂಚಿಸಿದ್ದಾರೆ. ಶಾಸಕರ ಸ್ಪಂದನೆ ವ್ಯಾಪಕ ಶ್ಲಾಘನೆಗೆ ಕಾರಣವಾಗಿದೆ.
