ಉಡುಪಿ: ಫ್ರೀಝರ್ ರಿಪೇರಿ ವೇಳೆ ವಿದ್ಯುತ್ ಶಾಕ್- ಎಲೆಕ್ಟ್ರೀಷಿಯನ್ ಸಾವು

ಉಡುಪಿ: ಉಡುಪಿಯ ಶ್ರೀಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದ ಸಮೀಪದ ಹೊಟೇಲ್ ಒಂದರಲ್ಲಿ ಫ್ರೀಝರ್ ರಿಪೇರಿ ಮಾಡುತ್ತಿದ್ದ ವೇಳೆ ವಿದ್ಯುತ್ ಶಾಕ್ ಹೊಡೆದು ಸೋಮವಾರ ಬೆಳಿಗ್ಗೆ ಎಲೆಕ್ಟ್ರೀಷಿಯನ್ ಒಬ್ಬ ಸಾವನ್ನಪ್ಪಿದ್ದಾನೆ. ಸಾವನ್ನಪ್ಪಿದ ಇಲೆಕ್ಟ್ರೀಷಿಯನ್ ನನ್ನು 76 ಬಡಗಬೆಟ್ಟುವಿನ ಬೈಲೂರು ಬಿ.ಬಿ.ನಗರ ನಿವಾಸಿ ಗಿರೀಶ್ ಶೇರಿಗಾರ್(45) ಎಂದು ಗುರುತಿಸಲಾಗಿದೆ.
ಸುಮಾರು 25 ವರ್ಷ ಗಳಿಂದ ಎಲೆಕ್ಟ್ರೀಷಿಯನ್ ಹಾಗೂ ಎಸಿ ಮೆಕ್ಯಾನಿಕ್ ಆಗಿ ಕೆಲಸ ಮಾಡಿಕೊಂಡಿದ್ದ ಗಿರೀಶ್ ಇಂದು ಬೆಳಿಗ್ಗೆ ಮಥುರಾ ಕಂಫರ್ಟ್ಸ್ ಹೋಟೆಲ್‌ಗೆ ಫ್ರೀಝರ್ ಪರಿಶೀಲನೆ ಮಾಡಲು ಬಂದಿದ್ದರು. ಪ್ರೀಝರ್ ರಿಪೇರಿ ಮಾಡುವಾಗ ವಿದ್ಯುತ್ ಶಾಕ್ ಹೊಡೆದಿದೆ. ಶಾಕ್ ನ ತೀವ್ರತೆಗೆ ತೀವ್ರವಾಗಿ ಅಸ್ವಸ್ಥಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲು ಕರೆದುಕೊಂಡು ಹೋಗುವಾಗ ದಾರಿ ಮಧ್ಯೆ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
