ನಿನ್ನ ಗಂಡ ಸುಖ ಕೊಡುತ್ತಾನಾ? ಎಂದವನ ವಿರುದ್ಧ ಎಫೈಆರ್ – ತಲೆ ಮರೆಸಿಕೊಂಡ ಡಾ. ರಾಬರ್ಟ್ ರೆಬೆಲ್ಲೋ
*ಕುಂದಾಪುರ ತಾಲೂಕು ಆಸ್ಪತ್ರೆಯಲ್ಲಿ ಕಾಮಾಂಧ ಆಡಳಿತ ವೈದ್ಯಾಧಿಕಾರಿ?*

ಕುಂದಾಪುರ: ಕಳೆದ ಆರು ತಿಂಗಳಿನಿಂದ ತನಗೆ ಹಗಲು ರಾತ್ರಿಯೆನ್ನದೇ ವೈದ್ಯಾಧಿಕಾರಿಯೊಬ್ಬ ಲೈಂಗಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಸಹೋದ್ಯೋಗಿ ವೈದ್ಯೆಯೊಬ್ಬಳು ನೀಡಿದ ದೂರಿನಂತೆ ಕುಂದಾಪುರ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ, ರಾಬರ್ಟ್ ರೆಬೆಲ್ಲೋ ಅವರ ವಿರುದ್ಧ ಮಾನಭಂಗಕ್ಕೆ ಯತ್ನ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕುಂದಾಪುರದ ಸರ್ಕಾರೀ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ರಾಬರ್ಟ್ ರೆಬೆಲ್ಲೋ ವಿರುದ್ಧ ಹಿಂದಿನಿಂದಲೇ ಹಲವು ಆರೋಪಗಳಿದ್ದವು. ಇದೀಗ ತನ್ನ ಆಸ್ಪತ್ರೆಯಲ್ಲಿರುವ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ವೈದ್ಯೆಗೆ ಕಳೆದ ಆರು ತಿಂಗಳಿನಿಂದ ಲೈಂಗಿಕ ಕಿರುಕುಳ, ಮಾನಸಿಕ ಹಿಂಸೆ ಹಾಗೂ ಮಾನಭಂಗಕ್ಕೆ ಯತ್ನಿಸಿದ್ದಾಗಿ ಮಹಿಳಾ ವೈದ್ಯ ಗುರುವಾರ ಸಂಜೆ ಕುಂದಾಪುರ ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ಪೊಲೀಸರು 354, 354A, 504, 506, 509 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೇ ಆರೋಪಿ ವಿರುದ್ಧ ಸಾರ್ವಜನಿಕರು ಆಕ್ರೋಶಿತರಾಗಿದ್ದು, ಆರೋಪಿ ರಾಬರ್ಟ್ ರೆಬೆಲ್ಲೋ ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.

