ಬಿಜೆಪಿಯಲ್ಲಿ ನಡೆಯುವ ತಪ್ಪುಗಳನ್ನು ಸರಿಪಡಿಸುವುದಕ್ಕಾಗಿ ಸ್ಪರ್ಧಿಸುತ್ತಿದ್ದೇನೆ – ರಘುಪತಿ ಭಟ್ ಸಂದರ್ಶನ
ಫೇಕ್ ವಿಡಿಯೋ ಮೂಲಕ ಕಪ್ಪು ಚುಕ್ಕೆಗೆ ಷಡ್ಯಂತ್ರ
ಒಂದೂವರೆ ವರ್ಷದಲ್ಲಿ ಬಿಜೆಪಿಗೆ ನಾನು ಬೇಡವಾದೆನೆ?
ನಾನು ಗೆದ್ದರೂ ಸೋತರೂ ಬಿಜೆಪಿಯೇ
ಪದವೀಧರರ ಸಮಸ್ಯೆ ಪರಿಹಾರಕ್ಕೆ ಸ್ಪಂದಿಸುವೆ
ರಘುಪತಿ ಭಟ್ ಜೊತೆಗೆ ವಾಸ್ತವ.ಕಾಂ ಸಂದರ್ಶನ
ಉಡುಪಿ: ನನ್ನ ಅಧಿಕಾರಾವಧಿಯಲ್ಲಿ ಉಡುಪಿ ಜಿಲ್ಲೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ನನ್ನ ಕೆಲಸದಲ್ಲಿ ಯಾವುದೇ ಕಪ್ಪು ಚುಕ್ಕಿಗಳಿಲ್ಲ. ಆದರೆ ಬಿಜೆಪಿ ನಾಯಕರು ಕೊಟ್ಟ ಮಾತಿಗೆ ತಪ್ಪಿದ್ದಾರೆ. ಪಕ್ಷದಲ್ಲಿ ನಡೆಯುವ ತಪ್ಪುಗಳನ್ನು ಸರಿಪಡಿಸುವುದಕ್ಕಾಗಿಯೇ ನಾನು ನೈರುತ್ಯ ಪದವೀಧರ ಕ್ಷೇತ್ರಕ್ಕೆ ಸ್ಪರ್ಧಿಸುತ್ತಿದ್ದೇನೆ ಎಂದು ಉಡುಪಿ ಮಾಜೀ ಶಾಸಕ ರಘುಪತಿ ಭಟ್ ಹೇಳಿದ್ದಾರೆ.
ವಾಸ್ತವ.ಕಾಂ ಜೊತೆಗೆ ಮಾತನಾಡಿದ ಅವರು, ವಿ.ಎಸ್.ಆಚಾರ್ ಜೊತೆಗೆ ರಾಜಕೀಯ ಕಲಿತವನು ನಾನು. ಜಿಲ್ಲಾ ಸಂಕೀರ್ಣವನ್ನು ರಜತಾದ್ರಿಯಲ್ಲಿ ಮಾಡಿದಾಗ ನನಗೆ ವಿ.ಎಸ್.ಆಚಾರ್ಯ ಅವರೇ ಮೆಚ್ಚಿದ್ದರು. ಅದು ನನಗೆ ನೋಬೆಲ್ ಪ್ರಶಸ್ತಿಗಿಂತ ದೊಡ್ಡದು. ವಿಧಾನಸಭಾ ಚುನಾವಣೆ ಸಂದರ್ಭ ಮೀನುಗಾರ ಸಮುದಾಯಕ್ಕೆ ಅವಕಾಶ ನೀಡಬೇಕು ಎಂದು ಪಕ್ಷದ ನಾಯಕರು ಹೇಳಿದಾಗ ಒಪ್ಪಿದ್ದೆ ಮತ್ತು ಅಭ್ಯರ್ಥಿ ಪರ ಪ್ರಾಮಾಣಿಕ ಕೆಲಸ ಮಾಡಿದ್ದೆ. ಆದರೆ ಚುನಾವಣೆ ಸಂದರ್ಭದಲ್ಲಿಯೇ ನ್ನ ಭಾವಚಿತ್ರಗಳನ್ನು ನಗರ ಕಚೇರಿಯಿಂದ ತೆಗೆದು ಹಾಕಿದಾಗ ಅಪಾರ ನೋವಾಯಿತು. ಪಕ್ಷಕ್ಕಾಗಿ ಜೀವ ಕೊಡುವವನು ನಾನು. ಅದಕ್ಕಾಗಿ ಎಲ್ಲವನ್ನೂ ಮೌನವಾಗಿ ಸ್ವೀಕರಿಸಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡಿಲ್ಲ. ಎಲ್ಲವೂ ನನ್ನ ಅವಧಿಯಲ್ಲಿ ಬಿಜೆಪಿ ಸರ್ಕಾರದ ಅನುದಾನದಲ್ಲಿ ಈಗ ಅಭಿವೃದ್ಧಿಯಾಗುತ್ತಿದೆ, ಎಲ್ಲಾ ಕ್ಷೇತ್ರಗಳಲ್ಲಿ ಹಿಮದಿನ ಶಾಸಕರ ಅನುದಾನದ ಜೊತೆಗೆ ಅವರ ಫೋಟೋ ಹಾಕುತ್ತಾರೆ. ಮತ್ತು ಅವರನ್ನು ಕರೆಸಿ ಉದ್ಘಾಟನೆ ನಡೆಸುತ್ತಿದ್ದಾರೆ. ಆದರೆ ನನಗೆ ಅವಮಾನ ಮಾಡಲಾಗುತ್ತಿದೆ. ಇದೆಲ್ಲದರಿಂದ ಬಹಳಷ್ಟು ದುಃಖಿತನಾಗಿದ್ದೇನೆ. ಆದರೂ ನನ್ನ ಪಕ್ಷ ಎನ್ನುವ ದೃಷ್ಟಿಯಲ್ಲಿ ನಾನು ಸಹಿಸಿಕೊಂಡಿದ್ದೇನೆ ಎಂದವರು ಹೇಳಿದರು.
ವಿಧಾನಸಭಾ ಚುನಾವಣೆಯ ಸಂದರ್ಭ ವಿಧಾನಪರಿಷತ್ ಟಿಕೆಟ್ ನೀಡುವ ಭರವಸೆ ನೀಡಲಾಗಿತ್ತು. ಆದರೆ ಹರ್ಷ ಕೊಲೆ ಪ್ರಕರಣದ ಬಳಿಕ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮತ್ತು ಪ್ರಸ್ತುತ ಬಿಜೆಪಿ ಸೇರಿದ ವ್ಯಕ್ತಿಗೆ ಟಿಕೆಟ್ ನೀಡಲಾಗಿದೆ. ನನ್ನನ್ನು ಹೊರತುಪಡಿಸಿಯೂ ಸಾಕಷ್ಟು ಹಿರಿಯ ಕಾರ್ಯಕರ್ತರು ಈ ಚುನಾವಣೆಗೆ ಭ್ಯರ್ಥಿಗಳಾಗಲು ಅರ್ಹರಿದ್ದರೂ ಅವರನ್ನೂ ಕಡೆಗಣಿಸಲಾಗಿದೆ. ಹಾಗಾಗಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಬಿಜೆಪಿಯ ಮಾನದಂಡಗಳು ತಪ್ಪಾಗುತ್ತಿವೆ ಎನ್ನುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಬಿಜೆಪಿ ನಾಯಕರ ತಪ್ಪುಗಳನ್ನು ಸರಿಪಡಿಸುವುದಕ್ಕಾಗಿಯೇ ನಾನು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ. ಕ್ಷೇತ್ರದಾದ್ಯಂತ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ ಎಂದರು.
ಈ ಚುನಾವಣೆಯಲ್ಲಿ ಯಾವುದೇ ಚಿಹ್ನೆ ಇಲ್ಲ. ಬದಲಾಗಿ ಅಭ್ಯರಱತಿಯ ಹೆಸರಿನ ಮುಂದೆ ‘|’ ಗುರುತು ಹಾಕುವ ಮೂಲಕ ಮತದಾನ ಮಾಡಲಾಗುತ್ತದೆ. ಹಾಗಾಗಿ ಇಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಚುನಾವಣೆಯಲ್ಲಿ ಆಯ್ಕೆಯಾದರೆ ನನ್ನ ಸೇವಾ ವ್ಯಾಪ್ತಿ ಹೆಚ್ಚಾಗುತ್ತದೆ. ಪದವೀಧರರ ಸಮಸ್ಯೆಗಳಿಗೆ ಹಾಗೂ ಶಿಕ್ಷಕರ ಸಮಸ್ಯೆಗಳಿಗೆ ಚಿಂತಕರ ಚಾವಡಿಯಾದ ವಿಧಾನಪರಿಷತ್ತಿನಲ್ಲಿ ಗಟ್ಟಿ ಧ್ವನಿಯಾಗುತ್ತೇನೆ ಎನ್ನುವ ಭರವಸೆ ನೀಡಿದರು.
ನನ್ನ ಕೆಲಸದ ಬಗ್ಗೆ ತಪ್ಪುಗಳನ್ನು ಹುಡುಕಲು ಸಾಧ್ಯವಿಲ್ಲದೇ ನನ್ನ ಬಗ್ಗೆ ಷಡ್ಯಂತ್ರ ರೂಪಿಸಲಾಗಿತ್ತು. ಯಾವುದೋ ಫೇಕ್ ವಿಡಿಯೋ ಕ್ರಿಯೇಟ್ ಮಾಡಿ ನನ್ನ ವಿಡಿಯೋ ಎಂದು ಬಿಂಬಿಸಲಾಯಿತು. ಈ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಕರಣಗಳೂ ದಾಖಲಾಗಿರಲಿಲ್ಲ. ಆದರೂ ನನ್ನ ಮೇಲೆ ಸಮಾಜದಲ್ಲಿ ಕಪ್ಪು ಚುಕ್ಕೆ ಇಡುವ ಪ್ರಯತ್ನವೂ ನಡೆಯಿತು. ಅಂತಹಾ ಯಾವುದೇ ವಿಡಿಯೋಗಳೂ ನನಗೆ ಸಂಬಂಧಿಸಿದ್ದಲ್ಲ. ಒಂದು ವೇಳೆ ಹಾಗೊಮದು ವಿಡಿಯೋ ಸಿಡಿ ಇದ್ದರೆ ಯಾಕೆ ಅದನ್ನು ಬಹಿರಂಗಗೊಳಿಸುತ್ತಿಲ್ಲ ಎಂದು ಪ್ರಶ್ನಿಸಿದ ಭಟ್, ಇಂತಹಾ ಷಡ್ಯಂತ್ರಗಳಿಗೆ ಜನ ಕಿವಿಗೊಡುವುದಿಲ್ಲ ೆನ್ನುವ ನಂಬಿಕೆ ನನಗಿದೆ ಎಂದು ಅವರು ಹೇಳಿದರು.
ನಾನು ಯಾರಿಗೂ ಪಾಠ ಕಲಿಸುವ ಉದ್ಧೇಶದಿಂದ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ನನಗೆ ಜನರ ಸೇವೆ ಮಾಡುವುದಕ್ಕೆ ನಾನು ಶಾಸಕನಾಗಬೇಕು. ನಾನು ಒಂದು ಕೆಲಸವನ್ನು ಹಿಡಿದರೆ ಅದು ಮುಗಿಯುವವರೆಗೂ ವಿರಮಿಸುವುದಿಲ್ಲ ಎನ್ನುವುದು ಈ ರಾಜ್ಯದ ಜನತೆಗೆ ಗೊತ್ತಿದೆ. ನಾನು ಈ ಚುನಾವಣೆಯಲ್ಲಿ ಗೆದ್ದರೂ ಬಿಜೆಪಿಯೇ, ಸೋತರೂ ಬಿಜೆಪಿಯೇ. ಬಿಜೆಪಿ ಈ ರಾಷ್ಟ್ರಕ್ಕೆ ಅನಿವಾರ್ಯ. ಸಂಘ ಪರಿವಾರದ ಸಲಹೆಗಳನ್ನು ಬಿಜೆಪಿ ಸರಿಯಾಗಿ ಪಾಲಿಸಿದರೆ ಖಂಡಿತ ಬಿಜೆಪಿಗೆ ದೇಶದಲ್ಲಿ ಉತ್ತಮ ಭವಿಷ್ಯವಿದೆ ಎಮದು ಹೇಳಿದರು.
ಪೂರ್ಣ ಮಾತುಗಳನ್ನು ಕೇಳುವ ವಿಡಿಯೋ ವೀಕ್ಷಿಸಲು ಇಲ್ಲ ಕ್ಲಿಕ್ಕಿಸಿ
