ಕುಂದಾಪುರ: ಮೊದಲ ಸಿಡಿಲಿಗೆ ಯುವಕ ಬಲಿ!

ಕುಂದಾಪುರ: ಮಳೆಯಿಲ್ಲದೇ ಬಿಸಿಲ ಬೇಗೆಗೆ ಬೆಂದಿದ್ದ ಕರಾವಳಿಯಲ್ಲಿ ಕಾಣಿಸಿಕೊಂಡ ಮೊದಲ ಸಿಡಿಲ ಮಳೆಗೆ ಅಂಗಳದಲ್ಲಿ ನಿಂತಿದ್ದ ಯುವಕನೊಬ್ಬ ಬಲಿಯಾಗಿದ್ದಾನೆ. ಕುಂದಾಪುರ ತಾಲೂಕಿನ ಸಿದ್ದಾಪುರ ಗ್ರಾಮದ ಜಡ್ಡಿನಬೈಲು ಎಂಬಲ್ಲಿರುವ ಅರೆಕಲ್ಲುಬೈಲು ಎಂಬಲ್ಲಿ ಮೇ 14ರ ಮಂಗಳವಾರ ಸಂಜೆ 3.45ರ ಸುಮಾರಿಗೆ ಈ ಘಟನೆ ನಡೆದಿದ್ದು, ಇಲ್ಲಿನ ನಿವಾಸಿ ವಿನೋದ ಎಂಬುವವರ ಗಂಡ ಸುರೇಶ್ ಶೆಟ್ಟಿ(39) ಎಂಬುವರೇ ಸಿಡಿಲಿಗೆ ಬಲಿಯಾದವರು.
ಸುರೇಶ್ ಶೆಟ್ಟಿ ಬೆಂಗಳೂರಿನ ಹೋಟೆಲ್ ಒಂದರಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದು ಸೋಮವಾರ ಊರಿಗೆ ಬಂದಿದ್ದರು. ಮಂಗಳವಾರ ಮಧ್ಯಾಹ್ನ ಮನೆಯ ಅಂಗಳದಲ್ಲಿ ಮಾವಿನ ಮರದ ಹತ್ತಿರ ನಿಂತಿರುವಾಗ ಏಕಾಏಕಿ ಸಿಡಿಲು ಬಡಿದಿದೆ.
ಸಿಡಿಲಿನ ರಭಸಕ್ಕೆ ಸುರೇಶ್ ಶೆಟ್ಟಿ ಮಾವಿನ ಮರದ ಹತ್ತಿರ ಅಂಗಾತನೇ ಬಿದ್ದಿದ್ದು, ತಕ್ಷಣ ಅವರ ಪತ್ನಿ ವಿನೋದ ಬೊಬ್ಬೆ ಹೊಡೆದಿದ್ದಾರೆ. ಬೊಬ್ಬೆ ಕೇಳಿದ ನೆರೆಕರೆಯವರು ಓಡಿ ಬಂದು ಉಪಚರಿಸಿದಾಗ ಸುರೇಶ್ ಶೆಟ್ಟಿ ಮಾತನಾಡುತ್ತಿರಲಿಲ್ಲ. ಕೂಡಲೇ ಅವರನ್ನು ಸಿದ್ದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಶಮಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
