ಮಗುಚಿ ಬಿದ್ದ ಇನ್ನೋವಾ : ಚನ್ನಪಟ್ಟಣದ ಯುವತಿ ಸಾವು – ಐವರು ಗಂಭೀರ!

ಕುಂದಾಪುರ: ಅತಿಯಾದ ವೇಗದ ಪರಿಣಾಮ ನಿಯಂತ್ರಣ ಕಳೆದುಕೊಂಡ ಇನ್ನೋವಾ ಕಾರೊಂದು ಮಗುಚಿ ಉರುಳಿದ ಪರಿಣಾಮ ಕಾರಿನಲ್ಲಿದ್ದ ಒಬ್ಬ ಮಹಿಳೆ ಸಾವನ್ನಪ್ಪಿದ ಘಟನೆ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಹುಣ್ಸೆ ಮಕ್ಕಿ – ಬಿದ್ಕಲ್ ಕಟ್ಟೆ ನಡುವಿನ ಗುಡ್ಡೆಯಂಗಡಿ ಎಂಬಲ್ಲಿ ಶನಿವಾರ ಸಂಜೆ ನಡೆದಿದೆ.

ಚೆನ್ನಪಟ್ಟಣ ಮೂಲದ ಮಹಿಳೆ ಕೀರ್ತಿ ಎಂಬಾಕೆ ಅಪಘಾತದಲ್ಲಿ ಸಾವನ್ನಪ್ಪಿದವರು ಎಂದು ಗುರುತಿಸಲಾಗಿದೆ.

ಚನ್ನಪಟ್ಟಣ ಮೂಲದ ಆರು ಮಂದಿ ಇನ್ನೋವಾ ಕಾರಿನಲ್ಲಿ ಧರ್ಮಸ್ಥಳ ಕಡೆಯಿಂದ ಮುರುಡೇಶ್ವರಕ್ಕೆ ಪ್ರಯಾಣಿಸುತ್ತಿದ್ದರು. ಬಿದ್ಕಲ್ ಕಟ್ಟೆ ಯ ಹೋಟೆಲ್‍ನಲ್ಲಿ ಊಟ ಮಾಡಿ ಹೊರಟಿದ್ದರು.

ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ರಸ್ತೆ ಬದಿಯ ಮರದ ದಿಣ್ಣೆಗೆ ಢಿಕ್ಕಿ ಹೊಡೆದ ಬಳಿಕ ಮರಕ್ಕೆ ಢಿಕ್ಕಿಹೊಡೆದು ಪಲ್ಟಿಯಾಗಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಉಳಿದ ಐದು ಮಂದಿಗೆ ಗಂಭೀರ ಗಾಯಗಳಾಗಿವೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.