ಕೋಟ: ಬೀಜಾಡಿಯ ಅಶಕ್ತ ಕುಟುಂಬವನ್ನು ಬ್ಯಾಂಕ್ ಸಾಲ ಮುಕ್ತಗೊಳಿಸಿದ ಶ್ರೀ ಕೃಷ್ಣಪ್ರಸಾದ್ ಫೌಂಡೇಶನ್ ನ ಮಾನವೀಯತೆಗೆ ವ್ಯಾಪಕ ಶ‍್ಲಾಘನೆ
ಕೋಟ: ತೆಂಗಿನ ಮರದಿಂದ ಬಿದ್ದು ಸೊಂಟದ ಕೆಳಭಾಗ ಸ್ವಾಧೀನ ಕಳೆದುಕೊಂಡು ಅಸಹಾಯಕ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿರುವ ಕುಂದಾಪುರ ತಾಲೂಕಿನ ಬೀಜಾಡಿಯ ನಿವಾಸಿ ಹರೀಶ್ ಪೂಜಾರಿ ಅವರ ಕಷ್ಟವನ್ನು ಅರಿತ ಇಲ್ಲಿನ ವಂಡಾರು ಶ್ರೀ ಕೃಷ್ಣಪ್ರಸಾದ್ ಫೌಂಡೇಶನ್ ಮುಖ್ಯಸ್ಥ ಸಂಪತ್ ಕುಮಾರ್ ಶೆಟ್ಟಿ ಅವರು ಹರೀಶ್ ಪೂಜಾರಿಯವರ ಸಾಲ ಮರುಪಾವತಿ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಹಾಸಿಗೆ ಹಿಡಿದರುವ ಹರೀಶ್ ಪೂಜಾರಿ 2019ರಲ್ಲಿ ತೆಂಗಿನ ಮರದಿಂದ ಬೀಳುವ ಮುನ್ನವೇ ಕೋಟ ಸಹಕಾರಿ ವ್ಯವಸಾಯಕ ಸಂಘದಲ್ಲಿ 25 ಸಾವಿರ ತುರ್ತು ಸಾಲ ಪಡೆದು ಕಟ್ಟಲಾಗದೆ ಅಸಹಾಯಕರಾಗಿ ಹಲವರ ಮೊರೆಹೋಗಿದ್ದರು. ಆದರೆ ಅವರ ಸಾಲಕ್ಕೆ ಹೆಗಲು ಕೊಡುವವರು ಯಾರೂ ಇಲ್ಲದ ಹಿನ್ನೆಲೆಯಲ್ಲಿ ಮಾಹಿತಿ ಪಡೆದ ಕೋಟದ ಪಂಚವರ್ಣ ಸಂಘಟನೆ ಸದಸ್ಯರು ವಂಡಾರು ಶ್ರೀ ಕೃಷ್ಣಪ್ರಸಾದ್ ಫೌಂಡೇಶನ್ ಮುಖ್ಯಸ್ಥ ಸಂಪತ್ ಕುಮಾರ್ ಶೆಟ್ಟಿ ಬಳಿ ಸಮಸ್ಯೆಯ ಬಗ್ಗೆ ಮಾಹಿತಿ ನೀಡಿದ್ದರು.
ಹರೀಶ್ ದುಸ್ಥಿತಿಗೆ ಸ್ಪಂದಿಸಿದ ಸಂಪತ್ ಕುಮಾರ್ ಶೆಟ್ಟಿ ಇವರ ನಿರ್ದೇಶನದ ಮೇರೆಗೆ ಶ್ರೀ ಕೃಷ್ಣ ಪ್ರಸಾದ್ ಫೌಂಡೇಶನ್ ವತಿಯಿಂದ ಗುರುವಾರ ಹರೀಶ್ ಪೂಜಾರಿ ಮೂಲಕ ಸಾಲ ನೀಡಿದ್ದ ಬ್ಯಾಂಕ್ ಪ್ರಭಂಧಕ ಅಜಿತ್ ಶೆಟ್ಟಿಯವರಿಗೆ 25 ಸಾವಿರ ಚೆಕ್ ಹಸ್ತಾಂತರಿಸಿ ಮಾನವೀಯತೆ ಮೆರೆದಿದ್ದಾರೆ. ನೊಂದ ಕುಟುಂಬಗಳ ಕಣ್ಣೊರೆಸುವ ಶ್ರೀ ಕೃಷ್ಣ ಪ್ರಸಾದ್ ಫೌಂಡೇಶನ್ ಸೇವಾ ಸಂಕಲ್ಪಕ್ಕೆ ಇದೀಗ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಚಕ್ ಹಸ್ತಾಂತರ ಸಂದರ್ಭದಲ್ಲಿ ಶ್ರೀ ಕೃಷ್ಣಪ್ರಸಾದ್ ಫೌಂಡೇಶನ್ ನಿರ್ವಾಹಕ ಚಂದ್ರಶೇಖರ ಸೇರಿದಂತೆ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಸುಮಾರು ಒಂದು ಕೋಟಿ ರೂಗಳ ನೆರವನ್ನು ಇತ್ತೀಚಿಗೆ ಶೈಕ್ಷಣಿಕ ಹಾಗೂ ಅನಾರೋಗ್ಯ ಪೀಡಿತರಿಗೆ ನೆರವು ನೀಡುವ ಮೂಲಕ ಸಮಾಜಕ್ಕೆ ಮಾದರಿ ಕಾರ್ಯವನ್ನು ಮಾಡಿದೆ.
