ಕೋಟ: ಹಸಿರು ಅಭಿಯಾನದ ಮೂಲಕ ಶ್ರದ್ಧಾಂಜಲಿ ಒಂದು ಮಾದರಿ ಕಾರ್ಯಕ್ರಮ – ವಕೀಲ ಮಂಜುನಾಥ ಗಿಳಿಯಾರು
ಕೋಟ: ಸಂಘಸಂಸ್ಥೆಗಳ ಮೂಲಕ ಸಮಾಜಸೇವೆಯೇ ಧ್ಯೇಯವಾಗಿರಿಸಿಕೊಂಡ ಒರ್ವ ವ್ಯಕ್ತಿಯ ಹೆಸರಿನಲ್ಲಿ ಹಸಿರು ಶ್ರದ್ಧಾಂಜಲಿ ಮಾದರಿ ಕಾರ್ಯಕ್ರಮವಾಗಿದೆ. ಪ್ರಕೃತಿ, ಪರಿಸರ ಸ್ವಚ್ಛತಾ ಆಂದೋಲನದ ಮೂಲಕ ಜನಮನ್ನಣೆ ಗಳಿಸಿದ್ದ ಸಂತೋಷ್ ಮೇಷ್ಟ್ರ ಶ್ರದ್ಧಾಂಜಲಿಯನ್ನು ಹಸಿರು ಅಭಿಯಾನದ ಮೂಲಕವೇ ಆಚರಿಸಿದ ಪಂಚವರ್ಣ ಸಂಘಟನೆಯ ಕಾರ್ಯ ಶ್ಲಾಘನೀಯ ಎಂದು ನ್ಯಾಯವಾದಿ ಟಿ.ಮಂಜುನಾಥ ಗಿಳಿಯಾರು ಅಭಿಪ್ರಾಯಪಟ್ಟರು.

ಭಾನುವಾರ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು,ಅನ್ನಪೂರ್ಣ ನರ್ಸರಿ ಪೇತ್ರಿ ಸ್ಥಳೀಯ ಸಂಘಸಂಸ್ಥೆಗಳ ಸಹಯೋಗದೊಂದಿಗೆ ಶ್ರೀರಾಮ್ ಫ್ರೆಂಡ್ಸ್ ಸಂಯೋಜನೆಯೊಂದಿಗೆ 314ನೇ ಭಾನುವಾರದ ಹಸಿರು ಹೆಜ್ಜೆ ಅಭಿಯಾನದ ಅಂಗವಾಗಿ ಕಳೆದ ವರ್ಷ ಅಗಲಿದ ಸಂಘದ ಸದಸ್ಯ ಸಂತೋಷ್ ಮೇಷ್ಟ್ರ ಹಸಿರು ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಆರಂಭದಲ್ಲಿ ಮಂಜಾನೆ ಮನೆ ಮನೆಗೆ ತೆರಳಿ ಗಿಡ ನೆಟ್ಟು ಅದರ ಕುರಿತು ಜಾಗೃತಿ ನೀಡಲಾಯಿತು. ಪಂಚವರ್ಣ ಸದಸ್ಯ ಪ್ರಭಾಕರ್ ಪಡುಕರೆ ಮಕ್ಕಳಿಗೆ ಪ್ರತಿಜ್ಞಾವಿಧಿ ಬೋಧಿಸಿ ಸ್ವಾಗತಿಸಿದರು. ಕೋಟ ಗ್ರಾಮಪಂಚಾಯತ್ ಮಾಜಿ ಸದಸ್ಯ ಭುಜಂಗ ಗುರಿಕಾರ ಸಂತೋಷ್ ಮೇಷ್ಟ್ರು ನಡೆದುಬಂದ ದಾರಿಗಳನ್ನು ಅವಲೋಕಿಸಿದರು. ಇಂಡಿಕಾ ಕಲಾ ಬಳಗದ ಅಧ್ಯಕ್ಷ ಎಂ.ಜಯರಾಮ ಶೆಟ್ಟಿ ಪಂಚವರ್ಣ ಕಾರ್ಯ ಹಾಗೂ ಸಂತೋಷ್ ಮೇಷ್ಟ್ರು ಈ ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಿದರು.

ಪಂಚವರ್ಣ ಯುವಕ ಮಂಡಲದ ಸಂಚಾಲಕ ಅಮೃತ್ ಜೋಗಿ ಅಧ್ಯಕ್ಷತೆವಹಿಸಿದ್ದರು. ಸ್ಥಳೀಯ ಮುಖಂಡ ನಾರಾಯಣ ಮೆಂಡನ್, ಉದ್ಭವಲಿಂಗ ಭಜನಾ ಮಂದಿರದ ಅಧ್ಯಕ್ಷ ನವೀನ್, ಶ್ರೀರಾಮ್ ಫ್ರೆಂಡ್ಸ್ ನ ಶಶಿಧರ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಉಪಸ್ಥಿತರಿದ್ದರು. ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ಕಾರ್ಯಕ್ರಮ ನಿರೂಪಿಸಿ , ರವೀಂದ್ರ ಕೋಟ ವಂದಿಸಿದರು.
