ಸಾಲಿಗ್ರಾಮ: ಶ್ರೀಗುರು ನರಸಿಂಹ ಸನ್ನಿಧಿಯಲ್ಲಿ ದ್ವಿತೀಯ ಶ್ರಾವಣ ಶನಿವಾರದ ಸಂಭ್ರಮ
ಸಾಲಿಗ್ರಾಮ: ಆಗಸ್ಟ್ 22ರಂದು 2ನೇ ಶ್ರಾವಣ ಮಾಸದ ಶನಿವಾರದ ಅಂಗವಾಗಿ ಬೆಳಗ್ಗಿನಿಂದ ಸಂಜೆಯವರೆಗೆ ಸುಮಾರು 20 ಸಾವಿರಕ್ಕೂ ಮಿಕ್ಕಿ ಭಕ್ತರು ಶ್ರೀ ಗುರುನರಸಿಂಹ ಮತ್ತು ಶ್ರೀ ಆಂಜನೇಯ ದೇವರ ದರ್ಶನ ಮಾಡಿ ಸೇವೆ ಸಲ್ಲಿಸಿದರು. ಮಧ್ಯಾಹ್ನ ಸುಮಾರು ಐದು ಸಾವಿರಕ್ಕೂ ಮಿಕ್ಕಿ ಭಕ್ತಾದಿಗಳು ಬೋಜನ ಪ್ರಸಾದವನ್ನು ಸ್ವೀಕರಿಸಿದರು.

ಬೆಳಿಗ್ಗೆ 10-3 0ರಿಂದ ಯಕ್ಷ ಮಂಜುಳಾ ಮಹಿಳಾ ಬಳಗ ಕದ್ರಿ ಮಂಗಳೂರು ಇವರಿಂದ ಮಂಡೋದರಿ ಪರಿಣಯ ಮತ್ತು ಗಣೇಶ ಮಹಿಮೆ ಎನ್ನುವ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ 1:30 ರಿಂದ ಶ್ರೀ ಮಹಿಷಮರ್ಧಿನಿ ವಿಪ್ರ ಮಹಿಳಾ ಬಳಗ ನೀಲಾವರ ಇವರಿಂದ ಭಜನೆ, ಮಧುರ ಧ್ವನಿ ಉಡುಪಿ ಛಾಯಾತರಂಗಿಣಿ ಸಂಗೀತ ಶಾಲೆ ಕೋಟ ಇವರ ಸಂಯೋಜನೆಯಲ್ಲಿ ವಿದುಷಿ ಶರ್ಮಿಳಾ ರಾವ್ ಹಾಗೂ ಶಿಷ್ಯವೃಂದದವರಿಂದ ವಯಲಿನ್ ವಾದನ ಕಾರ್ಯಕ್ರಮ ನಡೆಯಿತು.
ಸಂಜೆ 5:30 ರಿಂದ ಶ್ರೀದೇವಳದಲ್ಲಿ ಸೇವೆ ಸಲ್ಲಿಸಿದ ಸೇವಾಕರ್ತರನ್ನು ಸನ್ಮಾನಿಸಲಾಯಿತು. ಭಜನಾ ಸಂಘಗಳಲ್ಲಿ ದೇವಸ್ಥಾನಗಳಲ್ಲಿ ಧಾರ್ಮಿಕ ಸೇವೆಯನ್ನು ಮಾಡುತ್ತಾ ಬಂದಿರುವ ಹಾಗೂ ಬಡ ವಿದ್ಯಾರ್ಥಿಗಳಿಗೆ ಮತ್ತು ಬಡವರಿಗೆ ಆರ್ಥಿಕ ನೆರವನ್ನ ನೀಡುತ್ತಾ ಬಂದಿರುವ ಸಮಾಜ ಸೇವಕ ಪಾರಂಪಳ್ಳಿ ಸದಾಶಿವ ಮದ್ಯಸ್ಥರಿಗೆ, ವಿದ್ಯಾಸಂಸ್ಥೆ ಮತ್ತು ವಿವಿಧ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿರುವ ಮತ್ತು ಶ್ರೀ ಗುರುರಸಿಂಹ ದೇವಳದಲ್ಲಿ ನಿತ್ಯ ಪೂಜಾ ವಿಧಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಚಿತ್ರಪಾಡಿ ಜಗದೀಶ ಉಪಾಧ್ಯಾಯ, ಆಂಜನೇಯ ದೇವಳದಲ್ಲಿ 20 ವರ್ಷಗಳಿಗಿಂತಲೂ ಹೆಚ್ಚು ಸ್ವಚ್ಛತೆ ಮತ್ತು ಸೇವೆಯನ್ನು ಮಾಡುತ್ತ ಬಂದಿರುವ ರಾಮಚಂದ್ರ ಆಚಾರ್ ಮತ್ತು ಕರ್ಣ ಅವರಿಗೆ, ಶ್ರೀದೇವಳದಲ್ಲಿ ಅಡಿಪು ಸಿಬ್ಬಂದಿಯಾಗಿ ಸೇವೆ ಸಲ್ಲಿಸುತ್ತಿರುವ ಗಿರಿಜಾ ದೇವಾಡಿಗ ಮತ್ತು 30ವರ್ಷಕ್ಕಿಂತ ಹೆಚ್ಚು ಶ್ರೀದೇವಳದ ವಿಶೇಷ ದಿನಗಳಲ್ಲಿ ಸ್ವಚ್ಛತೆ ಕೆಲಸ ನಿಭಾಯಿಸುತ್ತಿರುವ ಪಾರಂಪಳ್ಳಿ ರಾಧಾ ಇವರನ್ನು ಆಡಳಿತ ಮಂಡಳಿಯ ಅಧ್ಯಕ್ಷ ಪ್ರಕಾಶ್ ಕಾರಂತ ಸನ್ಮಾನಿಸಿದರು.
ಉಪಾಧ್ಯಕ್ಷ ಚಂದ್ರಶೇಖರ ಉಪಾಧ್ಯಾಯ, ಕಾರ್ಯದರ್ಶಿ ಪರಶುರಾಮ ಭಟ್ಟ, ಕೋಶಾಧಿಕಾರಿ ಲಕ್ಷ್ಮೀನಾರಾಯಣ ಹೊಳ್ಳ, ಸದಸ್ಯರಾದ ಕೆ.ತಾರಾನಾಥ ಹೊಳ್ಳ, ಪ್ರಸನ್ನ ತುಂಗ ಮತ್ತು ವ್ಯವಸ್ಥಾಪಕರಾದ ಗಣೇಶ ಭಟ್ಟ ಉಪಸ್ಥಿತರಿದ್ದರು. ನಾಗರತ್ನ ಹೇರ್ಳೆ ನಿರೂಪಿಸಿದರು. ಬಳಿಕ ಶ್ರೀ ಮಹಾಲಿಂಗೇಶ್ವರ ಕಲಾರಂಗ ವಡ್ಡರ್ಸೆ (ರಿ) ಇವರಿಂದ. ಯಕ್ಷಗಾನ ಸುಧನ್ವಾರ್ಜುನ ಪ್ರಸಂಗ ನಡೆಯಿತು.
