BlogEconomyEntertainmentFashionGovernmentHighlightsHuman storiesLifestyleLocal newsOthersPoliticsProtestTop StoriesTrending

ಅಭಿವೃದ್ಧಿ ಬಗ್ಗೆ ಸುಳ್ಳು ಪ್ರಚಾರ ನಿಲ್ಲಿಸಿ, ವಾಸ್ತವಾಂಶಗಳ ಆಧಾರದ ಮೇಲೆ ಮಾತನಾಡಿ: ಕೇಶವ ಭಟ್

Aware others:

ಕುಂದಾಪುರ: “ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದರಿಂದ ಉಡುಪಿ ಜಿಲ್ಲೆಯ ಬಿಜೆಪಿ ಶಾಸಕರಿರುವ ಕ್ಷೇತ್ರಗಳಿಗೆ ಯಾವುದೇ ಅನುದಾನ ಬರುತ್ತಿಲ್ಲ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಬಿಜೆಪಿ ಸಂಸದರ ಮೂಲಕ ಅನುದಾನ ತಂದು ಅಭಿವೃದ್ಧಿ ಕಾಮಗಾರಿಗಳನ್ನು ಮಾಡುತ್ತಿದ್ದೇವೆ” ಎಂದು ಯೂಟ್ಯೂಬ್ ವಾಹಿನಿಯೊಂದರಲ್ಲಿ ಬಿಜೆಪಿಯ ಮುಖಂಡರೆನ್ನಿಸಿಕೊಂಡಿರುವ ವಿವೇಕ ಪೈ ನೀಡಿರುವ ಹೇಳಿಕೆ ಸಂಪೂರ್ಣವಾಗಿ ಜನರ ದಿಕ್ಕು ತಪ್ಪಿಸುವಂತಿದೆ ಎಂದು ಕಾಂಗ್ರೆಸ್ ಯುವ ನಾಯಕ ಹಾಗೂ ಕುಂದಾಪುರ ಪುರಸಭೆ ಮಾಜಿ ಸದಸ್ಯ ಕೇಶವ ಭಟ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿ, ಕುಂದಾಪುರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಜನರಿಗೆ ತಪ್ಪು ಮಾಹಿತಿ ನೀಡುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಆಗ್ರಹಿಸಿದ ಅವರು, ಅನುದಾನ ಬಿಡುಗಡೆ ಪ್ರಕ್ರಿಯೆಯ ಬಗ್ಗೆ ಕನಿಷ್ಟ ಅರಿವಿದ್ದವರು ಇಂತಹ ಹೇಳಿಕೆಗಳನ್ನು ನೀಡುವುದಿಲ್ಲ. ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಕುಡಿಯುವ ನೀರು, ಆರೋಗ್ಯ, ಶಿಕ್ಷಣ, ಸಮಾಜ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಕೃಷಿ ಸೇರಿದಂತೆ ವಿವಿಧ ಇಲಾಖೆಗಳ ಮೂಲಕ ರಾಜ್ಯ ಸರ್ಕಾರ ಯೋಜನಾವಾರು ಮತ್ತು ಅಗತ್ಯಕ್ಕೆ ಅನುಗುಣವಾಗಿ ಅನುದಾನ ಮಂಜೂರು ಮಾಡುತ್ತದೆ. ಕೇಂದ್ರ ಸರ್ಕಾರ ಯಾವುದೇ ವಿಧಾನಸಭಾ ಕ್ಷೇತ್ರಕ್ಕೆ ನೇರವಾಗಿ ಹಣ ವರ್ಗಾಯಿಸಿ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸುವ ವ್ಯವಸ್ಥೆ ಇಲ್ಲ. ಕೇಂದ್ರ ಪ್ರಾಯೋಜಿತ ಯೋಜನೆಗಳಿಗೂ ನಿಗಧಿತ ನಿಯಮಗಳಿದ್ದು, ಸಂಬಂಧಿತ ಇಲಾಖೆಗಳ ಮೂಲಕವೇ ಜಾರಿಯಾಗುತ್ತವೆ ಎಂದು ಹೇಳಿದ್ದಾರೆ.

ಸಂಸದರ ನಿಧಿಯ ಬಗ್ಗೆ ಮಾತನಾಡುವವರು ಅದರ ವಾಸ್ತವಿಕತೆ ಏನೆಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಒಬ್ಬ ಲೋಕಸಭಾ ಸದಸ್ಯರಿಗೆ ದೊರೆಯುವ ವಾರ್ಷಿಕ ₹5 ಕೋಟಿ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯನ್ನು (MPLADS) ಉಡುಪಿ ಜಿಲ್ಲೆಯ ಐದು ಹಾಗೂ ಚಿಕ್ಕಮಗಳೂರು ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಹಂಚಿಕೆ ಮಾಡಬೇಕಾಗುತ್ತದೆ. ಅಂದರೆ ಸರಾಸರಿ ಲೆಕ್ಕದಲ್ಲಿ ಒಂದು ವಿಧಾನಸಭಾ ಕ್ಷೇತ್ರಕ್ಕೆ ಬರುವ ಪಾಲು ₹40 ಲಕ್ಷಕ್ಕೂ ಕಡಿಮೆ. ಇಂತಹ ಸೀಮಿತ ಮೊತ್ತವನ್ನೇ ಇಡೀ ಕ್ಷೇತ್ರದ ಅಭಿವೃದ್ಧಿಗೆ ಕಾರಣ ಎಂದು ಹೇಳುವುದು ಜನರ ಕಣ್ಣಿಗೆ ಮಣ್ಣೆರಚುವ ಪ್ರಯತ್ನವಾಗಿದೆ ಎಂದು ಟೀಕಿಸಿದ್ದಾರೆ.

ಉಡುಪಿ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಮಾತನಾಡುವ ಬಿಜೆಪಿ ನಾಯಕರು ಭಾವನಾತ್ಮಕ ರಾಜಕೀಯ ಭಾಷಣಗಳನ್ನು ಮಾಡುವ ಬದಲು, ಯಾವ ಇಲಾಖೆಯಿಂದ ಎಷ್ಟು ಅನುದಾನ ಬಂದಿದೆ, ಯಾವ ಕಾಮಗಾರಿಗೆ ಎಷ್ಟು ಹಣ ಬಿಡುಗಡೆಯಾಗಿದೆ, ಯಾವ ಯೋಜನೆ ಯಾವ ಹಂತದಲ್ಲಿದೆ ಎಂಬ ವಾಸ್ತವಾಂಶಗಳನ್ನು ಜನರ ಮುಂದೆ ಇಡಲಿ. ಸುಳ್ಳು ಪ್ರಚಾರದಿಂದ ಜನರ ಬ್ರೈನ್ ವಾಷ್  ಸಾಧ್ಯವಿಲ್ಲ ಎಂದು ಕೇಶವ ಭಟ್ ಹೇಳಿದ್ದಾರೆ.

ಸಾರ್ವಜನಿಕ ಜೀವನದಲ್ಲಿರುವವರು ರಾಜಕೀಯ ಲಾಭಕ್ಕಾಗಿ ಜನರಿಗೆ ತಪ್ಪು ಮಾಹಿತಿ ನೀಡುವುದನ್ನು ಬಿಟ್ಟು, ಆಡಳಿತ ವ್ಯವಸ್ಥೆ ಮತ್ತು ಅಭಿವೃದ್ಧಿ ಪ್ರಕ್ರಿಯೆಗಳ ಬಗ್ಗೆ ಸರಿಯಾದ ತಿಳುವಳಿಕೆಯನ್ನು ನೀಡಬೇಕು. ಜನರು ಈಗ ಪ್ರಚಾರಕ್ಕಿಂತ ದಾಖಲೆಗಳನ್ನು ನಂಬುವ ಕಾಲ ಬಂದಿದೆ ಎಂಬುದನ್ನು ಬಿಜೆಪಿ ನಾಯಕರು ಅರಿತುಕೊಳ್ಳಬೇಕು ಎಂದು ಎಚ್ಚರಿಸಿದ್ದಾರೆ.


Aware others:

Leave a Reply

Your email address will not be published. Required fields are marked *

error: Content is protected !!