ಪತ್ರಕರ್ತ ನಾಗೇಶ್ ಗಾಣಿಗ ಅವರಿಗೆ ಕುಂದಾಪುರ ಪತ್ರಕರ್ತರ ಸಂಘದಿಂದ ನುಡಿನಮನ
ಕುಂದಾಪುರ : ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯ, ಪತ್ರಕರ್ತ ನಾಗೇಶ್ ಗಾಣಿಗ ಸಿದ್ದಾಪುರ ಅವರಿಗೆ ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನುಡಿನಮನ ಹಾಗೂ ಶ್ರದ್ಧಾಂಜಲಿ ಸಭೆಯು ಶುಕ್ರವಾರ ಕುಂದಾಪುರ ಪ್ರೆಸ್ ಕ್ಲಬ್ ನಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ನಾಗರಾಜ ರಾಯಪ್ಪನಮಠ ಅವರು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ನಾಗೇಶ್ ಗಾಣಿಗ ಅವರು ನಮ್ಮ ಸಂಘದ ಎಲ್ಲ ಚಟುವಟಿಕೆಗಳಲ್ಲೂ ಸಕ್ರೀಯರಾಗಿ ತೊಡಗಿಸಿಕೊಳ್ಳುತ್ತಿದ್ದರು. ಯಾರೊಂದಿಗೂ ವೈರತ್ವ, ದ್ವೇಷ ಮಾಡಿಕೊಳ್ಳದ ವ್ಯಕ್ತಿತ್ವ ಅವರದು. ಮನೆ, ಕುಟುಂಬ ಎಲ್ಲದರ ಜವಾಬ್ದಾರಿ ಹೊತ್ತಿದ್ದರು. ಎಷ್ಟೇ ನೋವಿದ್ದರೂ, ಅದನ್ನೆಲ್ಲ ನುಂಗಿಕೊಂಡು ಎಲ್ಲರೊಂದಿಗೂ ನಗು ನಗುತ್ತಾ ಇರುತ್ತಿದ್ದರು ಎಂದು ಸ್ಮರಿಸಿದರು.
ತಾಯಿ, ಅಣ್ಣನ ಆರೈಕೆ, ಸಹಿತ ಆ ಮನೆಗೆ ನಾಗೇಶ್ ಅವರೇ ಆಧಾರವಾಗಿದ್ದರು. ಸಂಘದ ಎಲ್ಲ ಕಾರ್ಯಕ್ರಮಗಳಲ್ಲೂ ಹೊಸ – ಹೊಸ ರೀತಿಯಾಗಿ ಆಯೋಜಿಸಲು ಸಲಹೆ ನೀಡುತ್ತಿದ್ದರು. ಯಾರೊಂದಿಗೂ ನಿಷ್ಠುರ ಮಾಡಿಕೊಳ್ಳದ ಪತ್ರಕರ್ತರಾಗಿದ್ದರು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಗಣೇಶ್ ಬೀಜಾಡಿ ನುಡಿದರು.
ಸಂಘದ ಉಪಾಧ್ಯಕ್ಷ ಸತೀಶ್ ಆಚಾರ್ ಮಾತನಾಡಿ, ನಮ್ಮಿಬ್ಬರದು 10-12 ವರ್ಷಗಳಿಗೂ ಹೆಚ್ಚು ಕಾಲದ ಒಡನಾಟ. ಅಲ್ಪಾವಧಿಯಲ್ಲೇ ಸಿದ್ದಾಪುರ, ಹೊಸಂಗಡಿ ಭಾಗದ ಜನರೆಲ್ಲರ ಅಪಾರ ಪ್ರೀತಿ, ವಿಶ್ವಾಸ ಗಳಿಸಿದ್ದರು ಎಂದರು.
ಸಂಘದ ಸದಸ್ಯ ಎ. ಭಾಸ್ಕರ ಶೆಟ್ಟಿ ನೇರಳಕಟ್ಟೆ ನುಡಿನಮನ ಸಲ್ಲಿಸಿದರು. ಜಿಲ್ಲಾ ಸಂಘದ ಕಾರ್ಯದರ್ಶಿ ಟಿ. ಲೋಕೇಶ್ ಆಚಾರ್ ತೆಕ್ಕಟ್ಟೆ, ಪದಾಧಿಕಾರಿಗಳಾದ ಚಂದ್ರಮ ತಲ್ಲೂರು, ಯೋಗೀಶ್ ಕುಂಭಾಶಿ, ತಾಲೂಕು ಸಂಘದ ಉಪಾಧ್ಯಕ್ಷ ಸಂತೋಷ್ ಕುಂದೇಶ್ವರ, ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಸಂಘದ ಕೋಶಾಧಿಕಾರಿ ಶ್ರೀಕಾಂತ್ ಹೆಮ್ಮಾಡಿ ನಿರೂಪಿಸಿದರು.
