ಉಪ್ಪಿನಕುದ್ರು: ಗೊಂಬೆಯಾಟ ಅಕಾಡೆಮಿಯಿಂದ ಸೂತ್ರ ಸಂಕಲ್ಪ- ಹೆಸರು ನೋಂದಾಯಿಸಲು ಜೂನ್ 30 ಕೊನೆಯ ದಿನ

ಕುಂದಾಪುರ: ಕಳೆದ 350 ವರ್ಷದ ಸುಧೀರ್ಘ ಇತಿಹಾಸದೊಂದಿಗೆ ನಿರಂತರ 6ನೇ ತಲೆಮಾರಿನಲ್ಲಿ ಮುಂದುವರೆಯುತ್ತಾ ಬರುತ್ತಿರುವ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಸಂಸ್ಥೆಯು ಆಸಕ್ತರಿಗೆ ಗೊಂಬೆಯಾಟ ಸೂತ್ರಧಾರಿಗಳಿಗೆ ವಿಶೇಷ ತರಬೇತಿ ಕಾರ್ಯಾಗಾರ ಹಮ್ಮಿಕೊಂಡಿದೆ ಎಂದು ಅಕಾಡೆಮಿಯ ಮುಖ್ಯಸ್ಥ ಭಾಸ್ಕರ ಕೊಗ್ಗ ಕಾಮತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಉಪ್ಪಿನಕುದ್ರು ಶ್ರೀ ದೇವಣ್ಣ ಪದ್ಮನಾಭ ಕಾಮತ್ ಮೆಮೊರಿಯಲ್ ಯಕ್ಷಗಾನ ಗೊಂಬೆಯಾಟ ಟ್ರಸ್ಟ್ ಹಾಗೂ ಶ್ರೀ ಗಣೇಶ್ ಯಕ್ಷಗಾನ ಗೊಂಬೆಯಾಟ ಮಂಡಲಿ ಸಹಯೋಗದಲ್ಲಿ ಸರಕಾರದ ಯಾವುದೇ ಧನ ಸಹಾಯ ಪಡೆಯದೇ ತನ್ನದೇ ಆದ ಸ್ವಂತ ಹೋರಾಟದ ಹಾದಿಯಲ್ಲಿ ಅನೇಕ ಸಾಧನೆಗಳನ್ನು ಮಾಡುತ್ತಾ ಬಂದಿದ್ದು, ಅನೇಕ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿ, ಸಂಮಾನ, ಹತ್ತಾರು ಬಾರಿ ವಿದೇಶ ಪ್ರವಾಸದ ಮೂಲಕ ದಾಖಲೆ ಮಾಡಿದೆ.

ಕನ್ನಡದ ಜಾನಪದ ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯ ಉಳಿಸಿ, ಬೆಳೆಸಿ, ಬೆಳಗಿಸುತ್ತಾ ಬರುತ್ತಿರುವ ಗೊಂಬೆಯಾಟ ಕಲೆಯನ್ನು ಭವಿಷ್ಯತ್ತಿನ ತಲೆಮಾರಿಗೆ ದಾಟಿಸುವಲ್ಲಿ ಸಶಕ್ತ ಕಲಾವಿದನನ್ನು ರೂಪಿಸಲು, ಸಂಪ್ರದಾಯವನ್ನು ಯುವ ಜನತೆಗೆ ಮುಟ್ಟಿಸಲು ಗೊಂಬೆಯಾಟ ಅಕಾಡೆಮಿ ಧೃಢ ಸಂಕಲ್ಪ ಮಾಡಿದೆ ಎಂದಿರುವ ಅವರು ಈ ನಿಟ್ಟಿನಲ್ಲಿ ಸೂತ್ರ ಸಂಕಲ್ಪ ದಡಿಯಲ್ಲಿ ಭವಿಷ್ಯತ್ತಿನ ಸೂತ್ರಧಾರರನ್ನು ರೂಪಿಸಲು ಶಾಲಾ-ಕಾಲೇಜುಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರು, ಸಮಾಜದ ಎಲ್ಲಾ ವರ್ಗದ ಆಸಕ್ತರು, ಎಲ್ಲಾ ವಯೋಮಾನದವರಿಗೆ ತರಬೇತಿ ನೀಡಿ ಹೊಸ ಸಾಧ್ಯತೆ, ಪ್ರಯೋಗಗಳ ಬಗ್ಗೆ ಮಾಹಿತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದ್ದು ಹೆಸರು ನೊಂದಾಯಿಸಲು ಕೊನೆಯ ದಿನಾಂಕ ಜೂನ್ 30 ಆಗಿರುತ್ತದೆ.

ಆಸಕ್ತರು, ವಿದ್ಯಾರ್ಥಿಗಳು, ಕಲಾವಿದರು ಹಾಗೂ ಸಾರ್ವಜನಿಕರು ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯನ್ನು ಸಂಪರ್ಕಿಸಿವಂತೆ ಅಥವಾ 9448437848/701959689 ಮೂಲಕ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
