ಕೋಟೇಶ್ವರ: ಬಿಜೆಪಿಯಿಂದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣಾ ಕಾರ್ಯಗಾರ
ಕುಂದಾಪುರ : ಕೋಟೇಶ್ವರದ ಸರಸ್ವತಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣಾ ಕಾರ್ಯಗಾರವನ್ನು ಕುಂದಾಪುರ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೇಶಾದ್ಯಂತ ಸ್ವಚ್ಛ, ನಿಖರ ಹಾಗೂ ನವೀಕೃತ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವ ಉದ್ದೇಶದಿಂದ ಭಾರತೀಯ ಚುನಾವಣಾ ಆಯೋಗ ಕೈಗೊಂಡಿರುವ ವಿಶೇಷ ಪರಿಷ್ಕರಣಾ ಕಾರ್ಯ ಅತ್ಯಂತ ಮಹತ್ವದ್ದಾಗಿದೆ ಎಂದರು. ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಮಾತನಾಡಿ, ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ 2026 ಭಾರತೀಯ ಚುನಾವಣಾ ಆಯೋಗದ ಮಹತ್ವದ ಉಪಕ್ರಮವಾಗಿದೆ. ಈ ಪ್ರಕ್ರಿಯೆ ಮೂಲಕ ನಕಲಿ ಮತದಾರರನ್ನು ಪಟ್ಟಿ ಕೈಬಿಟ್ಟು, ಹೊಸ ಅರ್ಹ ಮತದಾರರನ್ನು ಸೇರಿಸಲು ಅವಕಾಶ ಕಲ್ಪಿಸಲಾಗಿದ್ದು, ಕುಂದಾಪುರ ಕ್ಷೇತ್ರದಲ್ಲಿ ಈ ಕಾರ್ಯ ಚುರುಕಾಗಿ ಹಾಗೂ ಯಶಸ್ವಿಯಾಗಿ ಸಾಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂದಾಪುರ ಮಂಡಲ ಅಧ್ಯಕ್ಷ ಸುರೇಶ್ ಶೆಟ್ಟಿ ಗೋಪಾಡಿ ವಹಿಸಿದ್ದರು. ವಿಶೇಷ ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯಗಾರದ ಸಂಚಾಲಕ ರಾಜೇಶ್ ಶೆಟ್ಟಿ ಶಿರೂರು ಮುರ್ಕೈ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಉಡುಪಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ನಾಯಕ್ ಸೇರಿದಂತೆ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 222 ಬೂತ್ ಏಜೆಂಟ್‌ಗಳು, ಮಂಡಲದ ಪದಾಧಿಕಾರಿಗಳು, ವಿವಿಧ ಮೋರ್ಚಾಗಳ ಪ್ರತಿನಿಧಿಗಳು, ಜಿಲ್ಲಾ ಹಾಗೂ ಕ್ಷೇತ್ರ ಮಟ್ಟದ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
