ಕ್ರೀಡೆಯಿಂದ ಬದುಕು ಕಟ್ಟಿಕೊಳ್ಳಲು ಸಾಧ್ಯ- ಘ್ರನ್ಮೇಶ್ ಅಭಿಮತ
ಉಡುಪಿ ಜಿಲ್ಲಾ ಮಟ್ಟದ ಬಾಲಕ ಬಾಲಕಿಯರ ಬಾಕ್ಸಿoಗ್ ಪಂದ್ಯಾಟ ಉದ್ಘಾಟನೆ

ಕುಂದಾಪುರ : ಅಚಲವಾದ ಛಲ, ಆತ್ಮ ವಿಶ್ವಾಸವಿದ್ದರೆ ಒಬ್ಬ ಕ್ರೀಡಾಪಟು ಅತ್ಯುತ್ತಮ ಸಾಧನೆ ಮಾಡಿ ಕ್ರೀಡೆಗಳಿಂದ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ರಾಷ್ಟ್ರ ಮಟ್ಟದ ಕರಾಟೆ ಚಾoಪಿಯನ್ ಘ್ರನ್ಮೇಶ್ ಹೇಳಿದರು. ಅವರು ಶನಿವಾರ ಪದವಿ ಪೂರ್ವ ಶಿಕ್ಷಣ ಇಲಾಖೆ ಉಡುಪಿ ಹಾಗೂ ಜನತಾ ಪದವಿ ಪೂರ್ವ ಕಾಲೇಜು ಹೆಮ್ಮಾಡಿ ಇವರ ಆಶ್ರಯದಲ್ಲಿ ಹೆಮ್ಮಾಡಿಯ ಜನತಾ ಕ್ರೀಡಾoಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಪದವಿ ಪೂರ್ವ ಬಾಲಕ ಬಾಲಕಿಯರ ಬಾಕ್ಸಿoಗ್ ಪಂದ್ಯಾಟದಲ್ಲಿ ಭಾಗವಹಿಸಿ ಮಾತನಾಡಿದರು.
ಉಡುಪಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಾರುತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ದೈಹಿಕ ಬಲವರ್ಧನೆಯಲ್ಲಿ ಕ್ರೀಡೆಗಳ ಪಾತ್ರ ಅತ್ಯಮೂಲ್ಯವಾದುದು. ಕ್ರೀಡೆಗಳು ಏಕತೆ ಮತ್ತು ಐಕ್ಯತೆ ಸಾರಿ ನಾವೆಲ್ಲಾ ಒಂದೆ ಎಂಬ ಭಾವನೆ ಮೂಡಿಸುತ್ತವೆ. ವಿದ್ಯಾರ್ಥಿಗಳು ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಉಪ ಪ್ರಾಂಶುಪಾಲ ರಮೇಶ್ ಪೂಜಾರಿ, ಪದವಿ ಪೂರ್ವ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಗೌರವಾಧ್ಯಕ್ಷ ಜೀವನ್ ಕುಮಾರ್ ಶೆಟ್ಟಿ, ಜನತಾ ಪ್ರೌಢ ಶಾಲೆ ಹೆಮ್ಮಾಡಿಯ ಪ್ರಭಾರ ಮುಖ್ಯ ಶಿಕ್ಷಕ ಜಗದೀಶ್ ಶೆಟ್ಟಿ ಉಪಸ್ಥಿತರಿದ್ದರು. ಉಪನ್ಯಾಸಕ ಉದಯ ನಾಯ್ಕ ಸ್ವಾಗತಿಸಿ, ನಿರೂಪಿಸಿದರು.
