ಕೋಟ: ಹಲವು ಮಕ್ಕಳ ತಾಯಿ ಶ್ರೀ ಅಮೃತೇಶ್ವರಿ ದೇವಸ್ಥಾನದಲ್ಲಿ ಸಂಭ್ರಮದ ಶರನ್ನವರಾತ್ರಿ
ಕುಂದಾಪುರ: ಪ್ರತೀ ವರ್ಷದಂತೆ ನಡೆಯುವ ಶರನ್ನವರಾತ್ರಿ ಕಾರ್ಯಕ್ರಮವು ಕೋಟದ ಹಲವು ಮಕ್ಕಳ ತಾಯಿ ಶ್ರೀ ಅಮೃತೇಶ್ವರಿ ದೇವಸ್ಥಾನದಲ್ಲಿ ಸಂಭ್ರಮದಿಂದ ನಡೆಯುತ್ತಿದೆ. ಪ್ರತಿದಿನ ದೇವಿಯು ಒಂದೊಂದು ಅವತಾರಗಳಲ್ಲಿ ಸಿಂಗಾರಗೊಂಡು ವಿಶೇಷ ಪೂಜೆಗೆ ಒಳಗಾಗುತ್ತಿದ್ದಾಳೆ. ಸಾವಿರಾರು ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದು ದೇವೀ ಕೃಪೆಗೆ ಪಾತ್ರರಾಗುತ್ತಿದ್ದಾರೆ. ರಾಜ್ಯ ಹೊರ ರಾಜ್ಯಗಳಿಂದ ಆಗಮಿಸುತ್ತಿರುವ ಭಕ್ತರು ದೇವೀ ಸನ್ನಿಧಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಕೃತಾರ್ಥರಾಗುತ್ತಿದ್ದಾರೆ.


ಧಾರ್ಮಿಕ ದತ್ತಿ ಇಲಾಖೆ ಒಳಪಟ್ಟಿರುವ ಶ್ರೀ ಅಮೃತೆಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಆನಂದ ಸಿ ಕುಂದರ್ ಅವರು ನವರಾತ್ರಿಯ ವಿಶೇಷ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಗಳನ್ನೂ ಮಾಡಿದ್ದು, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ ಆಡಳಿತ ನಿರ್ವಹಣೆ ನಡೆಸುತ್ತಿದ್ದಾರೆ.


ಪ್ರತಿದಿನ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯುತ್ತಿದ್ದು. ಪ್ರತೀ ದಿನ ರಾತ್ರಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು, ಯಕ್ಷಗಾನ ಪ್ರದರ್ಶನ ನಡೆಯುತ್ತಿದೆ. ಈ ವರ್ಷ ಹತ್ತು ದಿನಗಳ ಕಾಲ ನವರಾತ್ರಿ ಆಚರಣೆ ನಡೆಯಲಿದ್ದು ಹನ್ನೊಂದನೇ ದಿನ ವಿಜಯದಶಮಿ ಹಬ್ಬ ಆಚರಿಸಲಾಗುತ್ತಿರುವುದು ವಿಶೇಷ.